ಬೆಳಗಾವಿ: 2024 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 69 ಕೊಲೆ ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ ಒಂದೇ ತಿಂಗಳಲ್ಲಿ 9 ಕೊಲೆ ಪ್ರಕರಣಗಳು ದಾಖಲಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾದಿಕಾರಿ ಡಾ. ಭೀಮಾಶಂಕರ ಗುಳೇದ ಅವರು ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಿಸೆಂಬರ್ 2024 ರಲ್ಲಿ ನಡೆದ ಎಲ್ಲ 9 ಕೊಲೆ ಪ್ರಕರಣಗಳು ವೈಯಕ್ತಿಕ ಕಾರಣದಿಂದ ನಡೆದಿದೆ. ಮೂರು ಪ್ರಕರಣದಲ್ಲಿ ಗಂಡ ಹೆಂಡತಿ ಜಗಳ, ಒಂದು ಪ್ರಕರಣದಲ್ಲಿ ಅನೈತಿಕ ಸಂಬಂಧ ಹಾಗೂ ಆರು ಪ್ರಕರಣಗಳು ಸಿವಿಲ್ ವ್ಯಾಜ್ಯ ಸಂಬಂಧ ಕೊಲೆ ಆಗಿದೆ ಎಂದು ತಿಳಿಸಿದರು.
ಇಡೀ ವರ್ಷ ನಮ್ಮ ಪೊಲೀಸರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಬೆಳಗಾವಿ ಪೊಲೀಸರು ಪ್ರತಿ ಗ್ರಾಮಕ್ಕೆ ತೆರಳಿ ಜನರಲ್ಲಿ ಮುಂಜಾಗೃತೆ ಮೂಡಿಸಿ ಸಿವಿಲ್ ವ್ಯಾಜ್ಯಗಳನ್ನು ಸರಿ ಮಾಡಿದ್ದಾರೆ. ಸಿವಿಲ್ ವ್ಯಾಜ್ಯಗಳಲ್ಲಿ ಜಾಗೃತಿ ಮೂಡಿಸಿದಾಗ ಕೊಲೆ ಪ್ರಕರಣಗಳು ಕಂಟ್ರೋಲ್ ಆಗುತ್ತಿದ್ದವು. ಆದರೆ ಡಿಸೆಂಬರ್ 2024 ರಲ್ಲಿ ಒಂದೇ ತಿಂಗಳಲ್ಲಿ 9 ಕೊಲೆ ಪ್ರಕರಣಗಳು ದಾಖಲಾಗಿವೆ.
10% ಮಾರಣಾಂತಿಕ ಅಪಘಾತ ಪ್ರಕರಣಗಳು ಕಡಿಮೆ ಆಗಿದೆ. ಅದಕ್ಕೆ ಬೆಳಗಾವಿ ಪೊಲೀಸರು ಶ್ರಮ ಪಟ್ಟು, ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸಿದ್ದಾರೆ. ಜಾಗೃತಿ ಅಭಿಯಾನ ಈ ವರ್ಷವೂ ನಿರಂತರವಾಗಿ ಮಾಡುತ್ತೇವೆ. ಅಪಘಾತ ಪ್ರಕರಣಗಳನ್ನು ತಡೆಯಲು ಅಪರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಕೊಡಲಾಗಿದೆ. ಜಿಲ್ಲಾಡಳಿತ ಜೊತೆ ಸೇರಿ, 30 ಕಡೆಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡುತ್ತೇವೆ. ಸರ್ಕಾರ ಅನುದಾನ ಒದಗಿಸಿದರೆ ಬ್ಲಾಕ್ ಸ್ಪಾಟ್ ಇರುವ ಕಡೆ ಹೆಚ್ಚಿನ ನಿಗಾ ವಹಿಸುತ್ತೇವೆ. ರಸ್ತೆ ಬದಿಯಲ್ಲಿ ಸೈನ್ ಬೋರ್ಡ್, ರೋಡ್ ಬ್ರೇಕರ್, ರಸ್ತೆ ಅಗಲೀಕರಣ ಮತ್ತು ಬೆಳಕಿನ ವ್ಯವಸ್ಥೆ ಮಾಡುತ್ತೇವೆ. ಇದೆಲ್ಲವೂ ಆದ್ರೆ ಮಾರಣಾಂತಿಕ ಅಪಘಾತ ಪ್ರಕರಣ ತಡೆಯಲು ಸಾಧ್ಯ ಆಗುತ್ತದೆ ಎಂದು ತಿಳಿಸಿದರು.
PublicNext
03/01/2025 03:28 pm