ಚಿಕ್ಕೋಡಿ: ಕೆಲ ದಿನಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದ ಜಮೀನೊಂದರಲ್ಲಿ ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿತ್ತು. ಅದು ಕೊಲೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಶವ ಪಂಚನಾಮೆ ಮಾಡುವ ವೇಳೆ ಆ ವ್ಯಕ್ತಿಯ ಇಡೀ ದೇಹವೇ ಎರಡು ತುಂಡಾಗಿದ್ದು ನೋಡಿ ತಮ್ಮ ತನಿಖೆಯ ಜಾಡು ಹಿಡಿದು ಹೊರಟಾಗ ಆ ವ್ಯಕ್ತಿ ಉಮರಾಣಿ ಗ್ರಾಮದ ಶ್ರೀಮಂತ ಇಟ್ನಾಳೆ ಎನ್ನುವುದು ಪತ್ತೆಯಾಗಿದೆ.
ದಿನವೂ ಕುಡಿದು ಬಂದು ಜಗಳಕ್ಕೆ ನಿಲ್ಲುತ್ತಿದ್ದ ಗಂಡ ಸರಸಕ್ಕೆ ಕರೆದಾಗ ಖಡಾಖಂಡಿತವಾಗಿ ನಿರಾಕರಿಸಿದ್ದ ಸಾವಿತ್ರಿ, ತನ್ನ ಕಣ್ಣ ಮುಂದೆಯೇ ಗಂಡ, ಮಗಳನ್ನು ಎಳೆದಾಡಿದ್ದು ನೋಡಿದ ಮೇಲೆ ಪತ್ನಿ ಸಾವಿತ್ರಿಯ ರಕ್ತ ಕುದಿಯತೊಡಗಿತ್ತು. ಮಕ್ಕಳು ಉಂಡು ಮಲಗಿದ ಮೇಲೆ ಹಾಸಿಗೆಯಲ್ಲಿ ಕುಡಿದ ಮತ್ತಿನಲ್ಲಿ ಮಲಗಿದ್ದ ಗಂಡನ ತಲೆಗೆ ಸೈಜುಗಲ್ಲು ಎತ್ತಿ ಹಾಕಿದ ಪತ್ನಿ ಸಾವಿತ್ರಿ ಶವ ಸಾಗಿಸಲು ಹೊಸದೊಂದು ಪ್ಲಾನ್ ಮಾಡಿಕೊಂಡಿದ್ದಳು.
ತಾನೊಬ್ಬಳಿಂದಲೇ ಗಂಡನ ಶವ ಸಾಗಿಸಲು ಆಗುವುದಿಲ್ಲ ಎಂದು ತಿಳಿದ ಸಾವಿತ್ರಿ ಗಂಡನ ಶವವನ್ನು ಹರಿತವಾದ ಆಯುಧದಿಂದ ಎರಡು ಭಾಗ ಮಾಡಿ ಬ್ಯಾರಲ್ ಒಂದರಲ್ಲಿ ಹಾಕಿದವಳೇ ಅದನ್ನು ಪಕ್ಕದ ಜಮೀನಿನಲ್ಲಿ ಕಬ್ಬು ಬೆಳೆಯ ನಡುವೆ ಎಸೆದು ಬಂದಿದ್ದಳು.
ಮಗಳ ಮೇಲೆ ಕಣ್ಣು ಹಾಕಿದ ಗಂಡನನ್ನು ಕೊಲೆ ಮಾಡುವಾಗ ಬಳಸಿದ್ದ ಮಾರಕಾಸ್ತ್ರ,ಕಲ್ಲು ಮತ್ತು ಶವ ಸಾಗಿಸಲು ಬಳಸಿದ್ದ ಬ್ಯಾರಲ್ ಎಲ್ಲವನ್ನೂ ವಿಲೇವಾರಿ ಮಾಡಿ ಸಾಕ್ಷಿ ಮುಚ್ಚಿ ಹಾಕಲು ಪ್ರಯತ್ನಿಸಿದ್ದ ಸಾವಿತ್ರಿ ಕೊನೆಗೂ ಪೊಲೀಸರ ತನಿಖೆಯಲ್ಲಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ತಾನು ಜೈಲು ಪಾಲಾದರೆ ಮಕ್ಕಳು ಅನಾಥರಾಗುತ್ತಾರೆ ಎನ್ನುವ ಕಾರಣಕ್ಕೆ ಕಣ್ಣೀರು ಹಾಕುತ್ತಿದ್ದ ಸಾವಿತ್ರಿಯನ್ನು ಅರೆಸ್ಟ್ ಮಾಡಿದ ಚಿಕ್ಕೋಡಿ ಪೊಲೀಸರು ಹಿಂಡಲಗಾ ಕಾರಾಗೃಹದ ಹಾದಿ ತೋರಿಸಿದ್ದಾರೆ. ಇತ್ತ ಸ್ವಂತ ಮಗಳ ಮೇಲೆಯೇ ಕಾಮದ ಪಿತ್ತ ನೆತ್ತಿಗೆ ಏರಿಸಿಕೊಂಡು ಕೈ ಹಾಕಲು ಹೋಗಿದ್ದ ಪಾಪಿ ತಂದೆ ಶ್ರೀಮಂತ ಇಟ್ನಾಳೆ ಮಾಡಬಾರದ್ದು ಮಾಡಿ ಮರಳಿ ಬಾರದ ಲೋಕಕ್ಕೆ ಹೋಗಿದ್ದಾನೆ. ಆದರೆ, ಮಕ್ಕಳ ವಿದ್ಯಾಭ್ಯಾಸ, ಓದು ಮುಗಿಸಿ ಅವರ ಮದುವೆ ಮಾಡಿ ಬದುಕು ಕಟ್ಟುವ ಕನಸು ಕಂಡಿದ್ದ ತಾಯಿಯೊಬ್ಬಳು ಜೈಲು ಪಾಲಾಗಿದ್ದಾಳೆ.
PublicNext
03/01/2025 11:11 am