ಬೆಳಗಾವಿ: ಬೆಳಗಾವಿ ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಸ ನಿರ್ವಹಣೆಯಲ್ಲಿ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ. ಇದಕ್ಕೆ ಸಾಕ್ಷಿ ಈ ದೃಶ್ಯಗಳು..
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 37 ಹಾಗೂ 38 ರಲ್ಲಿ ಬರುವ ನ್ಯೂ ಗಾಂಧೀ ನಗರ ಹಾಗೂ ಅಮನ ನಗರ. ಈ ಪ್ರದೇಶದಲ್ಲಿ ಕಸದ ಕೊಂಪೆ ರಸ್ತೆ ಪಕ್ಕದಲ್ಲಿ ಬಿದ್ದು ಸುಮಾರು ಎಂಟು ದಿನದಿಂದ ಕಸ ನಿರ್ವಹಣೆ ಆಗಿಲ್ಲ. ನ್ಯೂ ಗಾಂಧೀ ನಗರ ಪ್ರವೇಶದಿಂದ ಹಿಡಿದು ಪೊದ್ದಾರ್ ಶಾಲೆವರೆಗಿನ ರಸ್ತೆ ಉದ್ದಕ್ಕೂ ಎಲ್ಲೆಂದ್ರಲ್ಲಿ ಜನರು ಕಸ ಎಸೆಯುತ್ತಿದ್ದರಿಂದ ಈ ಪ್ರದೇಶ ಕಸದ ಡಂಪಿಂಗ್ ಯಾರ್ಡ್ ರೀತಿ ಕಾಣುತ್ತಿದೆ. ಇನ್ನು ಮನೆ ಮನೆಗೆ ತೆರಳಿ ಪಾಲಿಕೆ ಸಿಬ್ಬಂದಿ ಕಸ ನಿರ್ವಹಣೆ ಮಾಡಬೇಕು ಎಂಬ ನಿಯಮ ಇದ್ದರೂ, ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಮನೆಗೆ ಕಸ ಸಂಗ್ರಹಕ್ಕೆ ಬರುವ ಸಿಬ್ಬಂದಿ ಜನರಿಗೆ ಗೊತ್ತಿಲ್ಲದ ಹಾಗೆ ಬಂದು ಹೋಗುತ್ತಾರೆ. ಇದರಿಂದ ಜನರು ರಸ್ತೆ ಪಕ್ಕದಲ್ಲಿ ಕಸ ಎಸೆಯುತ್ತಿದ್ದಾರೆ.
ಪ್ರತಿನಿತ್ಯ ಓಡಾಡುವ ಜನ ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಇದೆ. ಕಸದ ಸಮಸ್ಯೆಯಿಂದ ಸೊಳ್ಳೆಗಳ ಕಾಟ, ಬೀದಿ ನಾಯಿಗಳ ಉಪಟಳ ಹೆಚ್ಚಾಗಿದೆ. ಇನ್ನೂ ಈ ಮುಖ್ಯ ರಸ್ತೆಯ ಮೇಲೆ ಅನೇಕ ಅಂಗಡಿ ಮುಂಗಟ್ಟುಗಳು ಇರುವುದರಿಂದ ಕಸದ ದುರ್ನಾತದಿಂದ ವ್ಯಾಪಾರದ ಮೇಲೆಯೂ ಪರಿಣಾಮ ಬೀಳುತ್ತಿದೆ. ಅಷ್ಟೆಲ್ಲಾ ಅವಾಂತರಗಳು ಆಗುತ್ತಿದ್ದರೂ ಈ ವಾರ್ಡ್ ಗಳ ಪಾಲಿಕೆ ಸದಸ್ಯರ ಪತ್ತೇನೆ ಇಲ್ಲ. ಪ್ರತಿನಿತ್ಯ ಕಸ ನಿರ್ವಹಣೆ ಮಾಡಿ ನಮಗೆ ನೆಮ್ಮದಿ ನೀಡಬೇಕು ಎನ್ನುತ್ತಾರೆ ವ್ಯಾಪಾರಿಗಳು.
ಒಟ್ಟಿನಲ್ಲಿ ನೂತನವಾಗಿ ಪಾಲಿಕೆ ಆಯುಕ್ತೆ ಆಗಿ ಆಗಮಿಸಿರುವ "ಶುಭ" ಅವರು, ಕಸ ನಿರ್ವಹಣೆಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಕಸ ನಿರ್ವಹಣೆಗೆ ಹಾಗೂ ಎಲ್ಲೆಂದ್ರಲ್ಲಿ ಕಸ ಎಸೆಯುವವರ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಬೆಳಗಾವಿ ಕ್ಲೀನ್ ಸಿಟಿ ಬದಲು ಗಬ್ಬು ಸಿಟಿ ಆಗುವುದ್ರಲ್ಲಿ ಅನುಮಾನವೇ ಇಲ್ಲ.
ಪ್ರಹ್ಲಾದ್ ಪೂಜಾರಿ, ಬೆಳಗಾವಿ
PublicNext
29/12/2024 08:57 am