ಬೆಳಗಾವಿ: ಬೆಳಗಾವಿ ನಗರದಲ್ಲಿ ಡಿ.26 ರಿಂದ ಜ. 4 ರವರೆಗೆ ಸರ್ದಾರ್ ಹೈಸ್ಕೂಲ್ ಮೈದಾನದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮತ್ತು ಖಾದಿ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಈ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ, ಒಂದು ವಾರದಲ್ಲೇ ಸುಮಾರು ಎರಡು ಕೋಟಿ ರೂಪಾಯಿಯ ವಹಿವಾಟು ನಡೆದಿದೆ.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದಾರೆ. ಒಟ್ಟು 150 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 10 ಆಹಾರ ಮೇಳದ ಮಳಿಗೆಗಳು ಮತ್ತು 50 ಖಾದಿ ಉತ್ಪನ್ನಗಳ ಮಳಿಗೆಗಳನ್ನು ಒಳಗೊಂಡಿದೆ. ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿದ ಉತ್ಪನ್ನಗಳು ಮತ್ತು ಖಾದಿ ಉತ್ಪನ್ನಗಳು ಮಾರಾಟ ಮಾಡುತ್ತಿರುವುದರಿಂದ ಅವರ ಸ್ವಾವಲಂಬಿ ಬದುಕಿಗೆ ಇದು ಅನುಕೂಲ ಆಗುತ್ತಿದೆ.
ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಚನ್ನಪಟ್ಟಣದ ಮರದ ಗೊಂಬೆಗಳು, ಕೊಪ್ಪಳದ ಕಿನ್ನಾಳ ಆಟದ ಸಾಮಾನುಗಳು, ಇಳಕಲ್ ಸೀರೆಗಳು, ಕೊಪ್ಪಳದ ಬಾಳೆ ನಾರಿನ ಉತ್ಪನ್ನಗಳು, ಉತ್ತರಕನ್ನಡದ ಚಿತ್ತಾರ ಕಲೆ ಉತ್ಪನ್ನಗಳು, ಚಿಕ್ಕಬಳ್ಳಾಪುರ ಚರ್ಮದಿಂದ ತಯಾರಿಸಿದ ವಿವಿಧ ವಿನ್ಯಾಸದ ಅಲಂಕಾರಿಕ ದೀಪಗಳು, ವಿಜಯನಗರ ಕಂಬಳಿ ಮತ್ತು ಡಮರು, ರಾಯಚೂರಿನ ಮುತ್ತಿನಹಾರ, ಶಿವಮೊಗ್ಗ ಮಣಿಸರಗಳು, ಬೀದರ ಬಿದರಿ, ಸಂಡೂರ ಲಂಬಾಣಿ ಉತ್ಪನ್ನಗಳು, ಮೈಸೂರು ಇನ್–ಲೇ, ನವಲಗುಂದ ಜರಿ ಹಾಗೂ ರೇಷ್ಮೆ ಸೀರೆಗಳು, ವಿವಿಧ ನವಾಕರ್ಷಣೆಯ ಬಟ್ಟೆಗಳು, ವಿವಿಧ ವಿನ್ಯಾಸದ ಬ್ಯಾಗ್ ಗಳು ಮತ್ತು ಗೃಹಾಲಂಕಾರಿಕ ವಸ್ತುಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು, ಆಹಾರ ಉತ್ಪನ್ನಗಳು ಮುಂತಾದವುಗಳು ಸಾರ್ವಜನಿಕರಿಗೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಲಿದೆ.
ಖಾದಿ ಮಳಿಗೆಗಳಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಬೇರೆ ಬೇರೆ ರಾಜ್ಯಗಳ ಖಾದಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ರಮುಖವಾಗಿ ಬೆಳಗಾವಿಯ ಸಂಕೇಶ್ವರದ ಕಂಬಳಿಗಳು, ಬಳ್ಳಾರಿ ಜೀನ್ಸ್, ಗದಗ-ಬೆಟಗೇರಿ, ಜಮಖಂಡಿ, ಧಾರವಾಡ, ವಿಜಯಪುರ ಪ್ರಸಿದ್ಧ ಖಾದಿ ಉತ್ಪನ್ನಗಳು, ಮೈಸೂರು ಚಾಪೆ, ಬಿಹಾರ ಮತ್ತು ಉತ್ತರ ಪ್ರದೇಶ ಖಾದಿ ವಸ್ತ್ರಗಳು, ಕಾಶ್ಮೀರ ಸೀರೆಗಳು, ರೇಮ್ಮೆ ಜಾಕೇಟ್ ಗಳು, ಆಂಧ್ರಪ್ರದೇಶದ ಕರಕುಶಲ ವಸ್ತುಗಳು ಸೇರಿದಂತೆ ಮಕ್ಕಳು, ಯುವಕ, ಯುವತಿಯರು, ಮಹಿಳೆಯರು, ವಯಸ್ಕರು ಹಾಗೂ ಹಿರಿಯರು ಸೇರಿದಂತೆ ಎಲ್ಲಾ ವಯೋಮಾನದವರ ಅಳತೆಗನುಗುಣವಾಗಿ ವಿವಿಧ ವಿನ್ಯಾಸದ ಸಿದ್ಧ ಉಡುಪುಗಳು ಲಭ್ಯವಿವೆ.
PublicNext
01/01/2025 10:27 pm