ಬೆಳಗಾವಿ: ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ನಮ್ಮ ಮನೆಯಲ್ಲಿ ಊಟಕ್ಕೆ ಸೇರಿದ್ದು ಇದೇ ಮೊದಲೇನಲ್ಲ. ಕಳೆದ ಇಪ್ಪತ್ತು ತಿಂಗಳಲ್ಲಿ ಹತ್ತಾರು ಬಾರಿ ಸೇರಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕುವೆಂಪು ನಗರದ ಸ್ವಗೃಹದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು ಬೆಂಗಳೂರಿನ ಮನೆಯಲ್ಲಿ ಊಟಕ್ಕೆ ಸೇರಿದ್ದು, ಊಟದೊಂದಿಗೆ ಕೆಲ ವಿಚಾರಗಳು ಚರ್ಚಿಸಿದ್ದೇವೆ. ರಾಜಕೀಯ, 2028ರಲ್ಲಿ ಮತ್ತೆ ನಮ್ಮ ಸರ್ಕಾರವನ್ನೇ ಅಧಿಕಾರಕ್ಕೆ ತರಬೇಕೆಂಬ ಚರ್ಚೆಗಳನ್ನು ಮಾಡಿದ್ದೇವೆ ಅಷ್ಟೇ. ಇನ್ನು ಸಿಎಂ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಬದಲಾವಣೆ ಮಾಡುವ ವ್ಯಾಪ್ತಿಯೂ ನಮ್ಮ ಬಳಿ ಬರಲ್ಲ. ಈ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಉದ್ಯಮಿದಾರರು, ಪತ್ರಕರ್ತರು ಸೇರಿದ್ದ ಹಾಗೇ ನಾವು ಕೂಡಿದ್ದಿವಿ ಅಷ್ಟೇ, ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯೇ ನಡೆದಿಲ್ಲ. ಈಗಾಗಲೇ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಇದ್ದಾರೆ. ಹೀಗಿದ್ದಾಗ ನಾವು ಅಧ್ಯಕ್ಷರಾಗುತ್ತೇವೆ ಅನ್ನುವುದು ಸೂಕ್ತವಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಮಯ ಬಂದಾಗ ನೊಡೋಣ ಎಂದರು.
ನನ್ನ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನಡುವೆ ಭಿನ್ನಾಭಿಪ್ರಾವಿಲ್ಲ. ಬೆಳಗಾವಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗಾಗಿ ಕಳೆದ ಆರು ತಿಂಗಳ ಹಿಂದೆಯೇ ಎಲ್ಲರೂ ಸಹಮತದಿಂದ ಒಂದೇ ಹೆಸರು ಕಳಿಸಿದ್ದೇವೆ. ಶೀಘ್ರವೇ ಬೆಳಗಾವಿ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವಾಗಲಿದೆ ಎಂದ ಅವರು, ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ ಶತಮಾನೋತ್ಸವದಲ್ಲಿ ಸಮಿತಿಗಳನ್ನು ರಚಿಸಲಾಗಿತ್ತು. ಎಲ್ಲರೂ ತಮ್ಮ ತಮ್ಮ ಕೆಲಸ ಮಾಡಿದ್ದಾರೆ. ನಮಗೆ ಜನರನ್ನು ಸೇರಿಸುವ ಜವಾಬ್ದಾರಿ ಇತ್ತು. ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಡಿ.ಕೆ. ಶಿವಕುಮಾರ ಅವರು ಶೋ ಆಗಿದ್ದಾರೆ ಅಷ್ಟೇ, ಹೀಗಾಗಿ ಅಧ್ಯಕ್ಷರು ಹೈಲೇಟ್ ಆಗುವುದು ಸ್ವಾಭಾವಿಕ. ಬೆಳಗಾವಿ ವಿಚಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲವೆಂದು ಸ್ಪಷ್ಟಪಡಿಸಿದರು.
ಬೆಳಗಾವಿ ನಗರದ ಅನಗೋಳದಲ್ಲಿರುವ ಡಿವಿಎಸ್ ಚೌಕ್‌ನಲ್ಲಿ ವೀರಸಂಭಾಜಿ ಮಹಾರಾಜರ ಮೂರ್ತಿ ಸ್ಥಾಪಿಸಲಾಗಿದ್ದು, ಕಾಮಗಾರಿ ಇನ್ನು ಪೂರ್ಣವಾಗಿಲ್ಲ. ಆದರೆ ಕಾಮಗಾರಿ ಮುಗಿಯದೆ ಮೂರ್ತಿ ಅನಾವರಣ ಹೇಗೆ ಮಾಡುತ್ತೀರಿ ಎಂದು ಕೆಲವರ ವಾದವಿದೆ. ಹೈಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದ್ದು, ಮೂರ್ತಿ ಅನಾವರಣದಲ್ಲಿ ನಾವು ಪಾಲ್ಗೊಳ್ಳುವುದಕ್ಕೆ ಬರುವುದಿಲ್ಲ. ಈ ಕುರಿತು ಪಾಲಿಕೆ ಆಯುಕ್ತರು ನನ್ನ ಬಳಿಯೂ ಚರ್ಚಿಸಿದ್ದಾರೆ. ಪ್ರೊಟೋಕಾಲ್ ಪಾಲಿಸಬೇಕಾಗುತ್ತದೆ. ಕೇಸ್ ನಡೆಯುತ್ತಿದ್ದರಿಂದ ಮೂರ್ತಿ ಅನಾವರಣ ಕಾರ್ಯಕ್ರಮ ಮುಂದಕ್ಕೆ ಹಾಕಲು ಪಾಲಿಕೆ ಆಯುಕ್ತರು ಮೇಯರ್‌ಗೆ ಪತ್ರ ಬರೆದಿದ್ದು, ಈ ಕುರಿತು ಏನು ನಿರ್ಧರಿಸುತ್ತಾರೆ ನೊಡೋಣ ಎಂದರು.
PublicNext
03/01/2025 08:51 pm