ಚಳ್ಳಕೆರೆ: ನಗರದಲ್ಲಿ ಸಂಚಾರಕ್ಕೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದ ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿಯವರು ವಿಶಾಲವಾದ ರಸ್ತೆಗಳನ್ನು ನಿರ್ಮಿಸಿ ರಸ್ತೆಯ ಎರಡು ಬದಿಯಲ್ಲೂ ಫುಟ್ ಪಾತ್ ನಿರ್ಮಿಸಿ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಆದರೆ, ಗೂಡಂಗಡಿಗಳು ಫುಟ್ ಪಾತ್ ಆವರಿಸಿಕೊಂಡರೆ, ಹಣ್ಣಿನ ಮಾರಾಟಗಾರರು ರಸ್ತೆಯನ್ನು ಆಕ್ರಮಿಸಿಕೊಂಡು ಮುಖ್ಯ ರಸ್ತೆಯನ್ನೇ ಹಣ್ಣಿನ ಮಾರುಕಟ್ಟೆ ಮಾಡಿಕೊಂಡಿದ್ದಾರೆ. ಇದರಿಂದಾಗಿ ಶಾಲಾ- ಕಾಲೇಜುಗಳಿಗೆ ಹೋಗಿ ಬರುವ ಮಕ್ಕಳು ಹಾಗೂ ವೃದ್ಧರ ಸಂಚಾರಕ್ಕೆ ತುಂಬಾ ತೊಂದರೆ ಉಂಟಾಗುತ್ತಿದ್ದು, ಅಪಘಾತಗಳೂ ಹೆಚ್ಚಾಗುತ್ತಿದೆ.
ಪೊಲೀಸ್ ಠಾಣೆ ಮುಂಭಾಗದಿಂದ ಖಾಸಗಿ ಬಸ್ ನಿಲ್ದಾಣದವರೆಗೂ ಮುಖ್ಯ ರಸ್ತೆಯಲ್ಲೇ ವಾಹನದಲ್ಲಿ ಹಣ್ಣುಗಳನ್ನು ತುಂಬಿಕೊಂಡು ಸಾಲಾಗಿ ನಿಲ್ಲಿಸಿ ವ್ಯಾಪಾರ ವಹಿವಾಟು ಮಾಡುವುದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಸ್ಥಳೀಯ ಅಧಿಕೃತ ಹಣ್ಣು ಮಾರಾಟಗಾರರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆಯಲ್ಲಿ ಹಣ್ಣು ಮಾರಾಟ ಮಾಡಬೇಡಿ ಎಂದರೆ ಹಣ್ಣು ಮಾರಾಟ ಮಾಡುವವರೆಲ್ಲರೂ ಒಟ್ಟಾಗಿ ವ್ಯಕ್ತಿಯ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಅಧಿಕಾರಿಗಳು ನೋಡಿಯೂ ನೋಡದಂತೆ ಇರುವುದರಿಂದ ಪೊಲೀಸ್ ಇಲಾಖೆ ಇತ್ತ ಗಮನ ಹರಿಸಿ ರಸ್ತೆಯಲ್ಲಿ ಹಣ್ಣು ಮಾರಾಟ ಮಾಡುವುದನ್ನು ತಡೆಯಬೇಕು ಎಂದು ನಗರದ ನಾಗರಿಕರು ಒತ್ತಾಯಿಸಿದ್ದಾರೆ.
PublicNext
26/12/2024 08:33 pm