ಚಳ್ಳಕೆರೆ: ಜಾನುವಾರುಗಳು ಮೇಯಲು ಮೀಸಲಿದ್ದ ಸರಕಾರಿ ಗೋಮಾಳ ಜಮೀನಿನಲ್ಲಿ ಅಕ್ರಮವಾಗಿ ಖಾತೆ ನೀಡಿರುವ ಆರೋಪಗಳು ಕೇಳಿ ಬಂದಿವೆ.
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮ ಪಂಚಾತಿಯಿ ಕಚೇರಿಯಲ್ಲಿ ಸುಮಾರು 60ಕ್ಕೂ ಜನರಿಗೆ ಅಕ್ರಮವಾಗಿ ಖಾತೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಅದರಲ್ಲೂ ಒಂದು 30+40 ಖಾಲಿ ನಿವೇಶನಕ್ಕೆ ಇಬ್ಬರಿಗೆ ಖಾತೆ ಮಾಡಲಾಗಿದೆ. ಒಂದೇ ನಿವೇಶನಕ್ಕೆ ಖಾತೆ ಮಾಡಿ ಚೆಕ್ಕ್ ಬಂದಿ ಹಾಗೂ ಖಾತೆ ಸಂಖ್ಯೆ ಬೇರೆ ಬೇರೆ ನೀಡಲಾಗಿದೆ. ಪರಿಣಾಮ ಇಬ್ಬರು ಫಲಾನುಭವಿಗಳ ನಡುವೆ ಜಗಳ ಆರಂಭವಾಗಿದ್ದು, ನಿವೇಶನಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ವೇಳೆ ದಾಖಲೆ ನೋಡಿದಾಗ ಅಕ್ರಮ ಬೆಳಕಿಗೆ ಬಂದಿದೆ.
ಸರಕಾರಿ ಗೋಮಾಳ ಹಾಗೂ ಅರಣ್ಯ ಇಲಾಖೆ ಹೆಸರಿನಲ್ಲಿರುವ ಭೂಮಿಯಲ್ಲಿ ಅಕ್ರಮ ಸಾಗುವಳಿ ಹಾಗೂ ಮನೆಗಳು ನಿರ್ಮಾಣ ಮಾಡಲು ಮುಂದಾಗಿದ್ದರೂ ಸಹ ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ.
ಗೋಪನಹಳ್ಳಿ ಹಾಗೂ ಚಿಕ್ಕೇನಹಳ್ಳಿ ಗ್ರಾಮಗಳ ವ್ಯಾಪ್ತಿಗೆ ಸೇರಿದ ಸರ್ಕಾರಿ ಆಸ್ತಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಿಷಯ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಗೊತ್ತಿದ್ದರೂ ಸಹ ಸರಕಾರಿ ಆಸ್ತಿ ರಕ್ಷಣೆಗೆ ಮುಂದಾಗಿಲ್ಲ. ಸರ್ಕಾರಿ ಗೋಮಾಳದಲ್ಲಿ ಹಕ್ಕು ಪತ್ರ ಪಡೆಯಲು ಸರ್ಕಾರ ಹಾಗೂ ಕಂದಾಯ ಇಲಾಖೆ ನಾನಾ ನಿಯಮ ರೂಪಿಸಿದ್ದಾರೆ. ಆದರೆ ಗೋಮಾಳದ ಭೂಮಿಯನ್ನು ಕಬಳಿಕೆ ಮಾಡಿದವರಿಗೇ ಗ್ರಾಪಂ ನಲ್ಲಿ ಅಕ್ರಮವಾಗಿ ಸರ್ಕಾರದ ಯಾವುದೇ ನಿಯಮಗಳನ್ನು ಪಾಲಿಸದೇ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡಿರುವವರಿಗೆ ಗ್ರಾಪಂ ಖಾತೆ ಮಾಡಿಕೊಟ್ಟಿದೆ. ಸರಕಾರಿ ಗೋಮಾಳದಲ್ಲಿ ಖಾಲಿ ನಿವೇಶನಗಳಿಗೆ ಹಾಗೂ ಮನೆಗಳಿಗೆ ಖಾತೆ ಮಾಡಲು ಗ್ರಾಪಂಗೆ ಅಧಿಕಾರ ಕೊಟ್ಟವರು ಯಾರು ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ.
PublicNext
27/12/2024 11:20 am