ಧಾರವಾಡ: ಚಿನ್ನ ಅಡವಿಟ್ಟು ಸಾಲ ಪಡೆಯುವ ಖಾಸಗಿ ಫೈನಾನ್ಸ್‌ವೊಂದರಲ್ಲಿ ನಕಲಿ ಚಿನ್ನ ಅಡವಿಟ್ಟು, ಲಕ್ಷಾಂತರ ರೂಪಾಯಿ ಸಾಲ ಪಡೆದುಕೊಳ್ಳುವುದಲ್ಲದೇ ಡಿಪಾಸಿಟ್ ಹೆಸರಿನ ಮೇಲೆಯೂ ಮೋಸ ಮಾಡಿರುವ ಭಾರೀ ವಂಚನೆ ಪ್ರಕರಣವೊಂದು ಧಾರವಾಡದಲ್ಲಿ ನಡೆದಿದ್ದು, ಇದರಲ್ಲಿ ಫೈನಾನ್ಸ್ ಶಾಖಾ ಮುಖ್ಯಸ್ಥನೇ ಶಾಮೀಲಾಗಿರೋದು ಬೆಳಕಿಗೆ ಬಂದಿದೆ.
ಮುತ್ತೂಟ್ ಫೈನಾನ್ಸ್, ನಮ್ಮ ರಾಜ್ಯದಲ್ಲಿ ಬಂಗಾರದ ಅಡಮಾನದ ಮೇಲೆ ಸಾಲ ಸೌಲಭ್ಯ ಕೊಡುವ ಪ್ರಮುಖ ಸಂಸ್ಥೆ. ಈ ಸಂಸ್ಥೆಯ ಅನೇಕ ಶಾಖೆಗಳು ಧಾರವಾಡದಲ್ಲಿವೆ. ಈ ಪೈಕಿ ನಗರದ ದಲಾಲ ಬೀದಿಯಲ್ಲಿರುವ ಶಾಖೆಯಲ್ಲಿಯೇ ಈ ಬಾರಿ ವಂಚನೆಯ ಪ್ರಕರಣ ಬಯಲಿಗೆ ಬಂದಿದ್ದು, ಖುದ್ದು ಕಂಪೆನಿಯ ರೀಜನಲ್ ಮುಖ್ಯಸ್ಥರು, ಇದೇ ಶಾಖೆಯ ವ್ಯವಸ್ಥಾಪಕ ಸೇರಿದಂತೆ ಮೂವರು ಸೇರಿ ವಂಚನೆ ಮಾಡಿರೋದಾಗಿ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ಶಾಖಾ ವ್ಯವಸ್ಥಾಪಕ ಮಹಮ್ಮದ್ ಯಾಸೀನ್ ಚಾಂದಖಾನ್ ಹಾಗೂ ಆತನ ಪರಿಚಿತರಾದ ಮನ್ಸೂರ ಟೀನ್‌ವಾಲೆ, ನೇಹಾ ನಬ್ಬುವಾಲೆ ಹಾಗೂ ಶಾಹೀನ್ ಗಾಣಗಾಪುರ ಎಂಬುವವರನ್ನು ಬಂಧಿಸಲಾಗಿದೆ.
ಈ ವಂಚನೆ ಪ್ರಕರಣಕ್ಕೆ ಶಾಖಾ ವ್ಯವಸ್ಥಾಪಕ ಚಾಂದಾಖಾನ್ ಮುಖ್ಯ ಕಿಂಗ್ ಪಿನ್ ಆಗಿದ್ದಾನೆ. ಈಗ ಮನ್ಸೂರ, ನೇಹಾ ಮತ್ತು ಶಾಹೀನ್ ಅವರ ಕಡೆಯಿಂದ ಒಟ್ಟು 1648 ಗ್ರಾಂನಷ್ಟು ನಕಲಿ ಚಿನ್ನವನ್ನು ಅಡವಿಟ್ಟುಕೊಂಡು ಅವರಿಗೆ 82 ಲಕ್ಷ 78 ಸಾವಿರದ 984 ರೂಪಾಯಿಯಷ್ಟು ಸಾಲ ಕೊಟ್ಟಿದ್ದಾನೆ. ಈ ಮೂವರು ಮಾತ್ರವಲ್ಲದೇ ಉಳಿದ ಅನೇಕರು ತಮ್ಮದೇ ಪರಿಚಿತರ ಖಾತೆಗಳಿಗೂ ನಕಲಿ ಚಿನ್ನದ ಮೇಲೆ ಸಾಲ ಕೊಟ್ಟಿದ್ದಾನೆ. ಅಲ್ಲದೇ ತಾನೇ ನಕಲಿ ರಸೀದಿ ಸೃಷ್ಟಿಸಿ ಸಂಸ್ಥೆಯಲ್ಲಿ ಲಕ್ಷದ ಮೇಲೆ ಹೂಡಿಕೆ ಮಾಡಿದ್ರೆ ಶೇಕಡಾ 20ರಷ್ಟು ಲಾಭಾಂಶ ಕೊಡಲಾಗುವುದು ಎಂದು ನಂಬಿಸಿ, ಸುಮಾರು 14 ಜನರಿಂದ 65 ಲಕ್ಷ ರೂಪಾಯಿ ಜಮೆ ಮಾಡಿಕೊಂಡಿದ್ದಾರೆ. ಆದರೆ ಆ ಹಣವನ್ನು ತಾನೇ ಹೊಡೆದು, ಅವರ ನಕಲಿ ರಸೀದಿಗಳಿಗೆ ಕಂಪೆನಿಯ ಸೀಲ್ ಹಾಕಿ ಕೊಟ್ಟಿದ್ದಾನೆ. ಈ ಮೂಲಕ ಲಕ್ಷಾಂತರ ರೂಪಾಯಿ ಲಪಟಾಯಿಸಿದ್ದು, ಗಮನಕ್ಕೆ ಬರುತ್ತಿದ್ದಂತೆಯೇ ಕಂಪೆನಿಯ ರೀಜನಲ್ ಮುಖ್ಯಸ್ಥರು, ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ನಾಲ್ವರನ್ನು ಬಂಧಿಸಿ, ತನಿಖೆ ಕೈಗೊಳ್ಳಲಾಗಿದೆ.
ಬೇಲಿಯೆ ಎದ್ದು ಹೊಲ ಮೇಯ್ದರೇ ಹೇಗೆ? ಅನ್ನೋ ಗಾದೆ ಮಾತಿನಂತೆ ತನ್ನ ಶಾಖೆಯಲ್ಲಿರೋ ಚಿನ್ನ ಮತ್ತು ಹಣಕ್ಕೆ ಜವಾಬ್ದಾರಿಯುತವಾಗಿ ಕಾವಲು ನಿಲ್ಲಬೇಕಾದ ಶಾಖಾ ವ್ಯವಸ್ಥಾಪಕನೇ ಇಲ್ಲಿ, ಅನ್ನ ಹಾಕಿದ ಸಂಸ್ಥೆಗೆ ಕನ್ನ ಹಾಕೋಕೆ ಹೋಗಿ ಸಿಕ್ಕಿ ಬಿದ್ದಿದ್ದು, ಇವರು ವಂಚಿಸಿದ್ದು ಇಷ್ಟೇನಾ? ಅಥವಾ ಇನ್ನೂ ಬೇರೆ ಬೇರೆ ಖಾತೆಗಳಿಗೂ ಹೀಗೆ ನಕಲಿ ಚಿನ್ನದ ಮೇಲೆ ಹಣ ಹೋಗಿದೆಯಾ? ಅನ್ನೋದು ಈಗ ಪೊಲೀಸರ ಹೆಚ್ಚಿನ ತನಿಖೆಯಿಂದಷ್ಟೇ ಬಯಲಿಗೆ ಬರಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 05:01 pm