ಹುಬ್ಬಳ್ಳಿ: ಅಯ್ಯಪ್ಪ ಮಾಲಾಧಾರಿಗಳ ಸಿಲಿಂಡರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಅಯ್ಯಪ್ಪ ಮಾಲಾಧಾರಿಗಳು ಸಾವು - ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಕಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಜೊತೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕೈ ಜೋಡಿಸಿದ್ದು, ಶತಾಯಗತಾಯ ಮಾಲಾಧಾರಿಗಳ ಜೀವ ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಗಾಯಗೊಂಡ ಅಯ್ಯಪ್ಪ ಮಾಲಾಧಾರಿಗಳ ಜೀವ ಉಳಿಸಲು ಈಗ ಕಿಮ್ಸ್ ಆಡಳಿತ ಮಂಡಳಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರನ್ನು ಕರೆಯಿಸಿಕೊಂಡಿದ್ದಾರೆ.
ಹೌದು,,,, ಕಳೆದ ರವಿವಾರ ತಡರಾತ್ರಿ ಹುಬ್ಬಳ್ಳಿಯ ಅಚ್ಚವ್ವ ಕಾಲೋನಿಯ, ಈಶ್ವರ ದೇವಸ್ಥಾನದಲ್ಲಿ ಸಂಭವಿಸಿರುವ ಅಯ್ಯಪ್ಪ ಮಾಲಾಧಾರಿಗಳ ಸಿಲಿಂಡರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿರುವ, ಮಾಲಾಧಾರಿಗಳ ಆರೋಗ್ಯ ಸ್ಥಿತಿ ಬಹಳಷ್ಟು ಗಂಭೀರವಾಗಿದೆ. 9 ಗಾಯಾಳುಗಳ ಪೈಕಿ ಓರ್ವ ಮಾಲಾಧಾರಿಯನ್ನು ಹೊರತುಪಡಿಸಿ, ಉಳಿದ ಎಂಟು ಮಾಲಾಧಾರಿಗಳ ಆರೋಗ್ಯ ಸ್ಥಿತಿ ಗಂಟೆಯಿಂದ ಗಂಟೆಗೆ ಕಠಿಣವಾಗುತ್ತಿದೆ. ಇನ್ನೂ ಎಲ್ಲರೂ ನಿದ್ದೆಯಲ್ಲಿ ಅನಿಲವನ್ನು ಉಸಿರಾಟ ಮಾಡಿದ್ದು, ಅನಿಲ ದೇಹದಲ್ಲಿ ಆವರಿಸಿಕೊಂಡಿದೆ. ಇದರಿಂದ ಉರಿತದ ಪ್ರಮಾಣ ಜಾಸ್ತಿ ಆಗುತ್ತಿದೆ. ಇದು ವೈದ್ಯರಿಗೆ ಸವಾಲಿನ ಕಾರ್ಯವಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ನಲ್ಲಿ 24*7 ವೈದ್ಯರ ತಂಡ, ಹಗಲು ರಾತ್ರಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಕಿಮ್ಸ್ ಆಸ್ಪತ್ರೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜನ್ ಡಾ.ಸ್ಮಿತಾ ಅವರ ತಂಡ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಪರಿಶೀಲಿಸಿ, ಕಿಮ್ಸ್ ವೈದ್ಯರಿಂದ ಮಾಹಿತಿ ಪಡೆದುಕೊಂಡಿದೆ.
ಇನ್ನು,,, ನಿನ್ನೆ ದಿನದಂದು ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಧಾರವಾಡ ಉಸ್ತುವಾರಿ ಸಚಿವ ಸಂತೋಷ್ ಲಾಡ್ , ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಾಲಾಧಾರಿಗಳ ಆರೋಗ್ಯ ವಿಚಾರಿಸಿದರು. ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಒಟ್ಟಾರೆ ಹೇಳುವುದಾದರೆ ಸಿಲಿಂಡರ್ ಬ್ಲಾಸ್ಟ್ ನಿಂದಾಗಿ ಅಯ್ಯಪ್ಪ ಮಾಲಾಧಾರಿಗಳ ಸ್ಥಿತಿ ಗಂಭೀರವಾಗಿದೆ. ಕಿಮ್ಸ್ ವೈದ್ಯರು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಆ ಅಯ್ಯಪ್ಪ ಸ್ವಾಮಿ ತಮ್ಮ ಭಕ್ತರನ್ನು ಕಾಪಾಡಬೇಕೆಂಬುವುದು ಎಲ್ಲರ ಆಶಯ...
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
25/12/2024 03:27 pm