ಹುಬ್ಬಳ್ಳಿ: 1924ರಲ್ಲಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ನಿಜಕ್ಕೂ ಐತಿಹಾಸಿಕ ಗತವೈಭವಕ್ಕೆ ಸಾಕ್ಷಿಯಾಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ಅವರ ನೆನಪಿನ ದೋಣಿಯಲ್ಲಿ ಅಧಿವೇಶನದ ಕಂಪನ್ನು ಬಿಚ್ಚಿಟ್ಟಿದ್ದಾರೆ.
ನಾನು ಮೊದಲನೆ ವರ್ಷದ ಬಿ.ಎ. ತರಗತಿಯಲ್ಲಿ ಓದುತ್ತಿದ್ದಾಗ 1924ನೆಯ ಡಿಸೆಂಬರ್ ತಿಂಗಳ ಉತ್ತರಾರ್ಧದಲ್ಲಿ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ನಡೆಯುತ್ತದೆಂದು ಗೊತ್ತಾಯಿತು. ಶಸ್ತ್ರಚಿಕಿತ್ಸೆಯ ಆನಂತರ ಆಗತಾನೆ ಸೆರೆಮನೆಯಿಂದ ಬಿಡುಗಡೆಯಾಗಿದ್ದ ಮಹಾತ್ಮ ಗಾಂಧಿಯವರು ಆ ಅಧಿವೇಶನದ ಅಧ್ಯಕ್ಷತೆ ವಹಿಸುತ್ತಾರೆ ಎಂಬ ವಾರ್ತೆ ನಮ್ಮನ್ನೆಲ್ಲ ಆಕರ್ಷಿಸಿತು. ಭರತ ಖಂಡದ ಬದುಕನ್ನೆಲ್ಲ ತುಂಬಿಕೊಂಡಿದ್ದರು.
ಗಾಂಧೀಜಿ, ಅವರಿಗೆ ಶಿಕ್ಷೆಯಾಗಿದ್ದು, ಶಸ್ತ್ರಚಿಕಿತ್ಸೆಯಾಗಿದ್ದು ಸೆರೆಯ ಅವಧಿ ಮುಗಿಯುವ ಮುನ್ನವೆ ಅವರು ಬಿಡುಗಡೆ ಹೊಂದಿ ಹೊರಗೆ ಬಂದದ್ದು ಎಲ್ಲವೂ ಪತ್ರಿಕೆಗಳಲ್ಲಿ ದಿನವೂ ಅನೇಕ ತಿಂಗಳುಗಳಿಂದ ದಪ್ಪಕ್ಷರದ ಮೊದಲನೆಯ ಪುಟದ ವಾರ್ತೆಗಳಾಗಿ, ಜನತೆಯ ಹೃದಯ ಸಮುದ್ರ ಕಡೆದಂತಾಗಿ, ದೇಶದ ಬದುಕು ವಿಕ್ಷುಬ್ಧವಾಗಿತ್ತು.
ಕಾಂಗ್ರೆಸ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಕ್ರಿಸ್‌ಮಸ್ ರಜವೂ ಪ್ರಾರಂಭವಾಗುತ್ತಿತ್ತಾದ್ದರಿಂದ ನಾವು ಕೆಲವರು ವಿದ್ಯಾರ್ಥಿ ಮಿತ್ರರು ಬೆಳಗಾವಿಗೆ ಹೋಗಲು ನಿಶ್ಚಯಿಸಿದೆವು ಎಂಬುವಂತ ಬಾವುಕ ನುಡಿಯನ್ನು ಬಿಚ್ಚಿಟ್ಟಿದ್ದಾರೆ.
ರೈಲು ಪ್ರಯಾಣವೂ ಒಂದು ಸಾಹಸವೇ ಆಗಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸುವ ಕಾಂಗ್ರೆಸ್ ಅಧಿವೇಶನಕ್ಕೆ ಹೊರಟ ಅಕ್ಷರಶಃ ಲಕ್ಷಾಂತರ ಜನರ ನೂಕುನುಗ್ಗಲು ಉಸಿರು ಕಟ್ಟಿಸುತ್ತಿತ್ತು. ಚಳಿಗಾಲವಾಗಿದ್ದರೂ ಕಂಪಾರ್ಟ್‌ಮೆಂಟಿನ ಒಳಗೆ ಕುದಿಯುವ ಸೆಕೆ! ಪ್ರತಿಯೊಂದು ನಿಲ್ದಾಣದಲ್ಲಿಯೂ ಆಗಲೆ ಕಿಕ್ಕಿರಿದಿದ್ದ ಗಾಡಿಗೆ ಹತ್ತಲು ಪ್ರಯತ್ನಿಸುವವರ ಮತ್ತು ಮೊದಲೇ ಹತ್ತಿ ನಿಲ್ಲಲು ಕೂಡ ಜಾಗವಿಲ್ಲದೆ ಜೋತುಬಿದ್ದವರ ನಡುವೆ ಜಗಳ, ಬೈಗುಳ, ಗುದ್ದಾಟ, ಆ ಕಿಕ್ಕಿರಿಕೆ. ನುಗ್ಗಾಟ, ಕೆಟ್ಟ ಉಸಿರಿನ ಬೆವರಿನ ಕೊಳಕು ವಾಸನೆ ಇವುಗಳನ್ನು ತಡೆಯಲಾರದೆ.
ರೈಲನ್ನು ಹೊರಡಲು ಬಿಡದಂತೆ ಸರಪಣಿ ಎಳೆದದ್ದೂ ಎಳೆದದ್ದೆ, ನಿಮ್ಮ ಗುಂಪಿನವರೆ ಮೊರು ನಾಲ್ಕು ಸಲ ಹಾಗೆ ಮಾಡಬೇಕಾಯ್ತು. ಕಡೆಗೆ ಗಾರ್ಡ್-ಸ್ಟೇಷನ್ ಮಾಸ್ಟರ್ ಬಂದು ಕೇಳಿಕೊಂಡ ಮೇಲೆಯೇ, ಸರಪಣಿ ಎಳೆಯುವುದನ್ನು ನಿಲ್ಲಿಸಿದೆವು. ಹೂಜಿಗಳಲ್ಲಿ ಇದ್ದ ನೀರೆಲ್ಲ ಖಾಲಿಯಾಗಿ ಧಗೆಗೆ ಮೂರ್ಛಿ ಹೋಗುವುದೊಂದು ಬಾಕಿ! ಅಂತೂ ಹೋಗಿ ಇಳಿದೆವು ಬೆಳಗಾವಿ ಸ್ಟೇಷನ್‌ನಲ್ಲಿ ಎಂಬ ಅನುಭವದ ಅಂಕಿತದ ಮೂಲಕ ಕುವೆಂಪು ಅಧಿವೇಶನದ ಅಂತರಾಳವನ್ನು ಬಿಚ್ಚಿಟ್ಟುಕೊಂಡಿದ್ದಾರೆ.
ಆ ಅಧಿವೇಶನದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸುಪ್ರಸಿದ್ದರಾಗಿದ್ದ ಅನೇಕ ವ್ಯಕ್ತಿಗಳು ನೆರೆದಿದ್ದರು. ಆದರೆ ನಮಗಿದ್ದುದು ಮುಖ್ಯವಾಗಿ ಒಂದೇ ಲಕ್ಷ್ಯ, ಗಾಂಧೀಜಿಯ ದರ್ಶನ! ಆದರೆ ಅದೇನು ಸುಲಭ ಸಾಧ್ಯವಾಗಿತ್ತೇ? ಆ ಜನಜಂಗುಳಿಯ ನೂಕುನುಗ್ಗಲಲ್ಲಿ ? ಅಧಿವೇಶನದ ವೇದಿಕೆಯ ಮೇಲೆ ಅವರನ್ನೇನೋ ನೋಡಬಹುದಾಗಿತ್ತು. ಆದರೆ ಅದು ನಾವು ಕೊಂಡಿದ್ದ ಟಿಕೆಟ್‌ನ ಸ್ಥಳಕ್ಕೆ ಬಹುದೂರವಾಗಿತ್ತು.
ಅಲ್ಲಿಂದ ಗಾಂಧೀಜಿ ಸಣ್ಣದೊಂದು ಪುತ್ತಲಿಯ ಗೊಂಬೆಯಷ್ಟೆ ಆಕಾರದಲ್ಲಿ ಕಾಣಿಸುತ್ತಿದ್ದರು. ಅದಕ್ಕಾಗಿ ನಾವು ಅವರು ಅಧಿವೇಶನಕ್ಕೆ ಬರುವ ಹೊತ್ತನ್ನೂ ಅವರು ಪ್ರವೇಶಿಸುವ ಮಹಾದ್ವಾರವನ್ನೂ ಪತ್ತೆಹಚ್ಚಿ ಬಿಸಿಲಿನಲ್ಲಿ ಕಾದೆವು ಎಂಬುವಂತ ಅನುಭವವನ್ನು ನೆನಪಿನ ದೋಣಿಯಲ್ಲಿ ಹಂಚಿಕೊಂಡಿದ್ದಾರೆ.
ಮಲ್ಲೇಶ್ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/12/2024 09:14 pm