ಹುಬ್ಬಳ್ಳಿ: ನಮ್ಮ ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ, ಆರ್ಥಿಕ ತಜ್ಞ ಮಾಜಿ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಅವರಿಗೂ ಸಿದ್ದಾರೂಢರ ನಾಡು ಹುಬ್ಬಳ್ಳಿಗೂ ಅವಿನಾಭಾವ ನಂಟು ಇದೆ. ಧಾರವಾಡ ಪೇಡಾ ಅಂದ್ರೆ ಅವರಿಗೆ ಪಂಚಪ್ರಾಣ ಅಂತೆ. ಸದ್ಯ ಮನಮೋಹನ್ ಸಿಂಗ್ ಅವರು ನಿನ್ನೆ ರಾತ್ರಿ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದು, ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ಹುಬ್ಬಳ್ಳಿಯಲ್ಲಿ ವಾಸವಾಗಿರುವ ಮನಮೋಹನ್ ಸಿಂಗ್ ಅವರ ಸಂಬಂಧಿಕರು ಪಬ್ಲಿಕ್ ನೆಕ್ಸ್ಟ್ ಮೂಲಕ ಅವರ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಆರ್ಥಿಕ ದಿಕ್ಕನ್ನು ಬದಲಾಯಿಸಿದಂತ ವಿಶ್ವ ಪ್ರಖ್ಯಾತ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೂ ನಮ್ಮ ಹುಬ್ಬಳ್ಳಿಗೂ ಒಡನಾಟವಿದೆ. ಚುನಾವಣೆ ಪ್ರಚಾರಕ್ಕೆ ಬಂದಾಗ ತಮ್ಮ ಸಂಬಂಧಿಕರನ್ನು ಭೇಟಿಯಾಗಿ ಅತೀ ಪ್ರೀತಿಯಿಂದ ಮಾತನಾಡಿಸುತ್ತಿದ್ದರಂತೆ. 2013 ರಲ್ಲಿ ಮೊಟ್ಟ ಮೊದಲ ಬಾರಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಹುಬ್ಬಳ್ಳಿಗೆ ಬಂದಿದ್ದರು. ಇಲ್ಲಿನ ಚುನಾವಣೆ ಪ್ರಚಾರ ಮಾಡಿ ಇಡೀ ಹುಬ್ಬಳ್ಳಿ ಧಾರವಾಡದ ಬಗ್ಗೆ ತಿಳಿದುಕೊಂಡ ಸಿಂಪಲ್ ರಾಜಕಾರಣಿ ಇವರು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನಮೋಹನ್ ಸಿಂಗ್ ಅವರ ಹತ್ತಿರದ ಸಂಬಂಧಿಕರು ವಾಸವಾಗಿದ್ದಾರೆ. ಅಂದ್ರೆ ಮನಮೋಹನ್ ಸಿಂಗ್ ಅವರ ಹೆಂಡತಿಯ ತಂಗಿ ಹರಪ್ರೀತ್ ಕೌರ್ ಮಕ್ಕಳು ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ರಿಸರ್ವ್ ಬ್ಯಾಂಕ್ ಗವರ್ನರ್ ಇದ್ದಾಗಿನಿಂದ ಇವರ ಕುಟುಂಬದ ಜೊತೆ ಒಡನಾಟವಿತ್ತಂತೆ.
ಇವರು ಸಹ 2018 ರಲ್ಲಿ ದೆಹಲಿಗೆ ಹೋಗಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಧಾರವಾಡ ಪೇಡಾ ಕೊಟ್ಟಿದ್ದರಂತೆ. ಈಗ ಅವರ ಅಗಲಿಕೆಯಿಂದ ಇಡೀ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಮನಮೋಹನ್ ಸಿಂಗ್ ಅವರ ಒಡನಾಟದ ಬಗ್ಗೆ ಹುಬ್ಬಳ್ಳಿಯ ಅವರ ಕುಟುಂಬಸ್ಥರು ಪಬ್ಲಿಕ್ ನೆಕ್ಸ್ಟ್ ಮೂಲಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ದಿ. ಮನಮೋಹನ್ ಸಿಂಗ್ ಅಂತ್ಯಕ್ರಿಯೆಗೆ ಹುಬ್ಬಳ್ಳಿಯಿಂದ ಅವರ ಕುಟುಂಬದ ನಾಲ್ಕು ಜನರು ದೆಹಲಿಗೆ ತೆರಳುತ್ತಿದ್ದಾರೆ.
ಇನ್ನು ಮನಮೋಹನ್ ಸಿಂಗ್ ಅಗಲಿಕೆ ಅತ್ಯಂತ ನೋವು ತಂದಿದೆ. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದ್ರೂ ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದವರು ಇವರು. ಬ್ಯುಸಿ ಕೆಲಸದ ಮಧ್ಯೆ ಕುಟುಂಬದ ಸದಸ್ಯರ ಜೊತೆ ಬೆರೆಯುತ್ತಿದ್ದರು. ಪ್ರಧಾನಮಂತ್ರಿ ಸ್ಥಾನಕ್ಕೆ ಹೋದ್ರು ಒಂದಿಷ್ಟು ಸೊಕ್ಕು ,ಗರ್ವ ಇರಲಿಲ್ಲ. ಎಲ್ಲರೊಂದಿಗೆ ಅತ್ಯಂತ ಸರಳವಾಗಿ ಬೆರೆತು ಮಾತನಾಡುತ್ತಿದ್ದರು ಎಂದು ಹುಬ್ಬಳ್ಳಿಯಿಂದ ಅವರ ಹತ್ತಿರದ ಸಂಬಂಧಿಕರು ಪಬ್ಲಿಕ್ ನೆಕ್ಸ್ಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಬ್ಲಿಕ್ ನೆಕ್ಸ್ಟ್ ಓದುಗರ ಮೂಲಕ ಸಂತಾಪ ಸೂಚಿಸಿದ್ರು.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
27/12/2024 05:17 pm