ಚಿಕ್ಕಮಗಳೂರು: ಇದು ರಾಷ್ಟ್ರೀಯ ಉದ್ಯಾನವನದ ನಡುವೆ ಇರೋ ಗ್ರಾಮ, ಈ ಊರಿಗೆ ಹೋಗೋದು ಮಾತ್ರ ಅಷ್ಟು ಸುಲಭದ ಮಾತಲ್ಲ. ಫೋರ್ ವ್ಹೀಲ್ ಜೀಪ್ ಇದ್ರೆ ಮಾತ್ರ ಇಲ್ಲಿಗೆ ಹೋಗಲು ಸಾಧ್ಯ. ಯಾವುದು ಈ ಊರು ಅಂತೀರಾ ಹಾಗಿದ್ರೆ ಈ ಸ್ಟೋರಿ ನೋಡಿ.
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರುವ ಗುತ್ಯಡ್ಕ ಕುರೆಕಲ್, ಮಲವಂತಿ ಹಾಗೆ ನೇತ್ರಾವತಿ ಪೀಕ್ ಗೆ ಹೋಗೋ ರಸ್ತೆ ಇದು. ಈ ರಸ್ತೆ ಇನ್ನೂ ಡಾಂಬರು ಅನ್ನೋದೆ ಕಂಡಿಲ್ಲ. ಕೊಂಚ ದೂರ ಸಿಮೆಂಟ್ ರಸ್ತೆ ಮಾಡಲಾಗಿದೆ. ಅಲ್ಲೊಂದು ಮೋರಿಯು ಇದೆ. ಅದ್ಯಾವಾಗ ಕುಸಿಯುತ್ತೋ ಅನ್ನೋ ಸ್ಥಿತಿಯಲ್ಲಿದೆ. ಈ ಬಗ್ಗೆ ಬೆಳ್ತಂಗಡಿ ಶಾಸಕಗರಿಗೂ ಹೇಳಿಯಾಯ್ತು, ಮೂಡಿಗೆರೆ ಶಾಸಕರಿಗೆ ಸಂಸದರಿಗೆ ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದಾಯ್ತು ಆದರೆ ಏನೂ ಪ್ರಯೋಜನ ಇಲ್ಲ. ಹೀಗಾಗಿ ನಾವೇ ರಸ್ತೆ ಸರಿಪಡಿಸ್ತಾ ಇದ್ದೇವೆ ಅಂತಿದ್ದಾರೆ ಸ್ಥಳೀಯರು.
ಇದು ನೇತ್ರಾವತಿ ಪೀಕ್ ಗೆ ಹೋಗೊ ರಸ್ತೆಯಾದ್ದರಿಂದ ಈ ರಸ್ತೆಯಲ್ಲಿ ನೂರಾರಲ್ಲ ಸಾವಿರಾರು ಪ್ರವಾಸಿಗರಂತೂ ಬರ್ತಾರೆ. ಆಫ್ ರೋಡ್ ಡ್ರೈವ್ ಅಂತಾ ಈ ರಸ್ತೆ ಪ್ರವಾಸಿಗರಿಗೇನೋ ಖುಷಿ ಕೊಡಬಹುದು. ಆದರೆ ಈ ರಸ್ತೆಯನ್ನೇ ನಂಬಿರೋ 70 ಕುಟುಂಬಗಳ ಜನರು, ಶಾಲೆಗೆ ಹೋಗೊ ಮಕ್ಕಳು ಮಾತ್ರ ಅದೆಷ್ಟೋ ದಶಕದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಅಲ್ಲದೇ ಈ ಪ್ರದೇಶದಲ್ಲಿ ನೆಟ್ವರ್ಕ್ ಕೂಡ ಇಲ್ಲ. ಯಾರಿಗಾದ್ರೂ ಫೋನ್ ಮಾಡಬೇಕು ಅಂದ್ರೆ ಯಾವುದಾದರೂ ಗುಡ್ಡ ಹತ್ತಬೇಕಾದ ಪರಿಸ್ಥಿತಿ ಇದೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ನಮ್ಮ ನೆನಪು ಆಗುತ್ತೆ ಅವಾಗ ಮಾತ್ರ ಬರ್ತಾರೆ ನಂತರ ತಿರುಗಿಯೂ ನೋಡಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಒಟ್ಟಾರೆ ಈ ಕುಗ್ರಾಮದ ಜನರ ಸ್ಥಿತಿಯಂತೂ ಕೇಳೋರೆ ಇಲ್ಲದಂತಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಾಢ ನಿದ್ರೆಯಿಂದ ಎಚ್ಚೆತ್ತು ಆದಷ್ಟು ಬೇಗ ರಸ್ತೆ ಕಾಮಗಾರಿ ಮಾಡಿ ಕೊಡಬೇಕಿದೆ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್,ಚಿಕ್ಕಮಗಳೂರು
PublicNext
03/12/2024 03:35 pm