ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರದಲ್ಲಿ 11 ಎಕರೆ ಜಮೀನಿಗಾಗಿ ಬದುಕಿರೋ ಅಜ್ಜಿಯನ್ನೇ ದಾಖಲೆಗಳಲ್ಲಿ ಸಾಯಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗಂಗಮ್ಮ ಎಂಬ ಅಜ್ಜಿಗೆ ಮೂವರು ಹೆಣ್ಣು ಮಕ್ಕಳು ಓರ್ವ ಗಂಡು ಮಗ. ಈ ವೃದ್ಧೆಯ ಗಂಡನಿಗೆ ಇಬ್ಬರು ಅಣ್ಣಂದಿರು. ತುಂಬು ಕುಟುಂಬ. ಈಕೆಯ ಪತಿ ತೀರಿಹೋಗಿದ್ದಾರೆ. ಆದ್ರೆ, ಈಕೆ ಪಾಲಿಗೆ ಬರಬೇಕಿದ್ದ 11 ಎಕರೆ ಜಮೀನಿಗಾಗಿ ಈಕೆಯ ಭಾವ ಹಾಗೂ ಭಾವನ ಮಕ್ಕಳು ಬದುಕಿರುವಾಗಲೇ ಈಕೆ ಸತ್ತಿದ್ದಾಳೆಂದು ನಕಲಿ ದಾಖಲೆ ಸೃಷ್ಟಿಸಿ 11 ಎಕರೆ ಆಸ್ತಿಯನ್ನ ಕಬಳಿಸಿದ್ದಾರೆ. ಈಗ ಈಕೆಯ ಮಗ ಹಾಗೂ ಹೆಣ್ಣು ಮಕ್ಕಳು ಆಸ್ತಿಗಾಗಿ ಡಿಸಿ-ಎಸಿ-ತಹಶೀಲ್ದಾರ್ ಕಚೇರಿ, ಪೊಲೀಸ್ ಸ್ಟೇಷನ್ ಅಂತ ಬೀದಿ-ಬೀದಿ ಅಲೆಯುತ್ತಿದ್ದಾರೆ. ಆದ್ರೆ, ಜಮೀನಿಗೆ ಖಾತೆ ಕೂಡ ಮುಗಿದಿದ್ದು ಪಹಣಿಯೂ ಬಂದಿದೆ. ಈಗ ಇವ್ರು ಆಸ್ತಿಗಾಗಿ ಹೋರಾಟಕ್ಕಿಳಿದಿದ್ದಾರೆ.
ಆಸ್ತಿಗಾಗಿ ಸಂಬಂಧಿಕರೇ ಅಜ್ಜಿಯನ್ನ ಬದುಕಿರುವಾಗ್ಲೇ ಸಾಯ್ಸಿದ್ರು ಸರಿ. ಆದ್ರೆ, ಮರಣ ಪ್ರಮಾಣ ಪತ್ರವನ್ನ ಅಧಿಕಾರಿಗಳು ಹೇಗೆ ಕೊಟ್ರು ಅನ್ನೋದು ಯಕ್ಷಪ್ರಶ್ನೆಯಾಗಿದೆ. ಯಾಕಂದ್ರೆ, ಹಳ್ಳಿಯಲ್ಲಿ ಅಜ್ಜಿ ಸತ್ರೆ ಗ್ರಾಮ ಪಂಚಾಯಿತಿ ಮರಣಪ್ರಮಾಣ ಪತ್ರ ನೀಡಬೇಕು. ಕಡತದಲ್ಲಿ ದಾಖಲೆಯಾಗಿರಬೇಕು. ಅದು ಆರ್.ಐ. ಮೂಲಕ ತಹಶೀಲ್ದಾರ್ ಕಚೇರಿ ತಲುಪಿ ಅಲ್ಲಿ ತಾಲೂಕು ಆಡಳಿತದಿಂದ ಅಧಿಕೃತ ಮರಣಪ್ರಮಾಣ ಪತ್ರ ಸಿಗುತ್ತೆ. ತಹಶೀಲ್ದಾರ್ ಕಚೇರಿಯಲ್ಲೂ ಅಧಿಕೃತ ಪ್ರಮಾಣಪತ್ರ ಸಿಕ್ಕಿದೆ ಅಂದ್ರೆ ಕೆಳಗಿಂದ ಮೇಲಿನವರೆಗೂ ಅಕ್ರಮ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ಒಟ್ಟಾರೆ, ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತು ಈಗ ಬೆಳೆಯುತ್ತಾ ಆಸ್ತಿಗಾಗಿ ಕೊಲೆಗಡುಕರಾಗ್ತಿದ್ದಾರೆ ಅಂದ್ರು ತಪ್ಪಿಲ್ಲ.
ಡ್ಯಾನಿ, ಪಬ್ಲಿಕ್ ನೆಕ್ಸ್ಟ್, ಚಿಕ್ಕಮಗಳೂರು
PublicNext
04/12/2024 01:22 pm