ಚಿಕ್ಕಮಗಳೂರು: ನವೆಂಬರ್ 1 ಕನ್ನಡಿಗರಿಗೆ ಹೆಮ್ಮೆಯ ದಿನ ಮಾತ್ರವಲ್ಲ ಇಡೀ ತಿಂಗಳು ಕನ್ನಡಾಂಬೆಯ ಹುಟ್ಟುಹಬ್ಬವನ್ನು ರಾಜ್ಯದ ವಿವಿಧ ಭಾಗದಲ್ಲಿ ವಿಶಿಷ್ಟವಾಗಿ ವಿನೂತನವಾಗಿ ಆಚರಿಸುತ್ತಾರೆ. ಅಂತಹ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದ ಕನ್ನಡ ರಾಜು ಕೂಡ ಒಬ್ಬರು. ತಮ್ಮ ಇಡೀ ಜೀವನವನ್ನು ಕನ್ನಡನಾಡು, ನುಡಿ, ಭಾಷೆಗೆ ಮೀಸಲಿಟ್ಟಿರುವುದರಿಂದ ಕಳಸದಲ್ಲಿ ಕನ್ನಡ ರಾಜು ಅಂತಾನೇ ಫೇಮಸ್. ಇವರು ಕಳೆದ 33 ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ತಮ್ಮ ಸ್ವಂತ ಹಣದಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣ, ಡಾ. ರಾಜ್ ಕನ್ನಡ ಸಂಘದಲ್ಲಿ ಗುರುತಿಸಿಕೊಂಡಿರುವ ಇವರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ರಾಜ್ ಕುಟುಂಬದೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಇವರು ರಾಜ್ ಕುಟುಂಬದ ಯಾರೇ ಕಳಸಕ್ಕೆ ಬಂದರು ಮೊದಲು ಫೋನ್ ಮಾಡುವುದೇ ಕನ್ನಡ ರಾಜು ಅವರಿಗೆ.
ಇವರ ಅಭಿಮಾನವನ್ನು ಕಂಡು ರಾಜು ಮನೆಗೆ ವರನಟ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ಬಡತನದಲ್ಲೇ ಬೆಳೆದ ರಾಜು ಅವರು ಚಿತ್ರಮಂದಿರವನ್ನು ನಿರ್ಮಿಸುವ ಮಹಾದಾಸೆ ಹೊಂದಿದ್ದರು. ಇದನ್ನು ಪುನೀತ್ ರಾಜಕುಮಾರ್ ಬಳಿ ಹೇಳಿಕೊಂಡಾಗ ಅವರು ಸಂಪೂರ್ಣ ಹಣ ಸಹಾಯ ಮಾಡುವುದಾಗಿ ಓಪ್ಪಿಕೊಂಡಿದ್ದರಂತೆ. ಇನ್ನೇನು ಕೆಲ ದಿನಗಳಲ್ಲಿ ಅಪ್ಪು ಅವರು ಕಳಸಕ್ಕೆ ಬರಬೇಕು ಅನ್ನುವಷ್ಟರಲ್ಲಿ ಭಗವಂತ ಕರೆದುಕೊಂಡ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಕಳಸ ಭಾಗದಲ್ಲಿ ಕನ್ನಡದ ಯಾವುದೇ ಚಲನಚಿತ್ರ ಶೂಟಿಂಗ್ ನಡೆದರೂ ರಾಜು ಅವರು ಕಲಾವಿದರಿಗೆ ಸನ್ಮಾನಿಸಿ ಗೌರವಿಸುತ್ತಾರೆ. ಒಟ್ಟಿನಲ್ಲಿ ಕನ್ನಡಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ರಾಜು ಆವರ ಕಾರ್ಯಕ್ಕೆ ನಮ್ಮದೊಂದು ಹ್ಯಾಟ್ಸಫ್.
PublicNext
30/11/2024 03:39 pm