ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಾ. ಧನಂಜಯ ವೈ. ಚಂದ್ರಚೂಡ, ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರಿಗೆ ಕಾನೂನು ಸಚಿವ ಎಚ್.ಕೆ.ಪಾಟೀಲ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಗೌರವ ಡಾಕ್ಟರೇಟ್ ಸ್ವೀಕರಿಸಿದ ನ್ಯಾ.ಧನಂಜಯ ಚಂದ್ರಚೂಡ ಮಾತನಾಡಿ, ನ್ಯಾಯಾಂಗ ಇಲಾಖೆ ನೇಮಕಾತಿಯಲ್ಲಿ ದೇಶಾದ್ಯಂತ ಏಕರೂಪ ವ್ಯವಸ್ಥೆ ಜಾರಿಗೆ ಬರಬೇಕು. ನ್ಯಾಯಾಂಗ ಇಲಾಖೆಯ ವಿವಿಧ ಹುದ್ದೆಗಳ ಭರ್ತಿಯಲ್ಲಿ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕಲಿತವರಿಗೆ ಪ್ರತ್ಯೇಕ ಶ್ರೇಯಾಂಕ ನೀಡುವ ವ್ಯವಸ್ಥೆ ರದ್ದುಗೊಳ್ಳಬೇಕು. ಇದರಿಂದ ಉಳಿದ ಕಾನೂನು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡಿದಂತಾಗುತ್ತದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಶೋಕ ಬಿ. ಹಿಂಚಿಗೇರಿ ಹಾಗೂ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿದರು. ಕಾನೂನು ಸಚಿವ ಎಚ್.ಕೆ. ಪಾಟೀಲ, ಕುಲಪತಿ ಡಾ.ಸಿ. ಬಸವರಾಜು, ಕುಲಸಚಿವರಾದ ಡಾ. ರತ್ನಾ ಭರಮಗೌಡರ, ಅನುರಾಧಾ ವಸ್ತ್ರದ ಇದ್ದರು.
ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ವ್ಯಾಪ್ತಿಯ 124 ಕಾನೂನು ಪದವಿ ಕಾಲೇಜುಗಳ 3 ಮತ್ತು 5 ವರ್ಷಗಳ ಕಾನೂನು ಪದವಿ ಪಡೆದ 16 ವಿದ್ಯಾರ್ಥಿಗಳಿಗೆ ಕಾನೂನು ಸಚಿವ ಎಚ್.ಕೆ. ಪಾಟೀಲ ಚಿನ್ನದ ಪದಕ ಮತ್ತು ವಿವಿಧ ನಗದು ಪುರಸ್ಕಾರಗಳನ್ನು ನೀಡಿ ಗೌರವಿಸಿದರು. 5,234 ವಿದ್ಯಾರ್ಥಿಗಳಿಗೆ ಕಾನೂನು ಪದವಿ, 15 ವಿದ್ಯಾರ್ಥಿಗಳಿಗೆ ಪಿಎಚ್ ಡಿ ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ ಸರ್ಕಾರಿ ಅಧಿಕಾರಿಗಳಿಬ್ಬರೂ ಕಾನೂನು ಪದವಿಯಲ್ಲಿ ರ‍್ಯಾಂಕ್ ವಿಜೇತರಾಗಿ ಹೊರಹೊಮ್ಮಿ ವಿದ್ಯಾರ್ಥಿಗಳಿಗೆ ಮಾದರಿಯಾದರು. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ನ ಮುಖ್ಯ ಆಡಳಿತಾಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಾಗೂ ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆಯಾಗಿರುವ ಅನುರಾಧಾ ವಸ್ತ್ರದ ವಿಶಿಷ್ಟ ಸಾಧನೆಗೆ ಪಾತ್ರರಾದರು.
ಮೇಜರ್ ಸಿದ್ದಲಿಂಗಯ್ಯ ಕ್ರಿಮಿನಲ್ ಲಾ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಎಸ್.ಎಂ.ಪಂಚಗಟ್ಟಿ ಪ್ರಾಯೋಜಿತ ನಗದು ಪುರಸ್ಕಾರಕ್ಕೆ ಭಾಜನರಾದರು. ಅವರ ಪತ್ನಿ, ಕಾನೂನು ವಿಶ್ವವಿದ್ಯಾಲಯದ ಕುಲಸಚಿವೆ ಅನುರಾಧಾ ವಸ್ತ್ರದ ಆಂಗ್ಲ ಮಾಧ್ಯಮ ಕಾನೂನು ಪದವಿಯಲ್ಲಿ 10ನೇ ರ‍್ಯಾಂಕ್ ಗಳಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/11/2024 10:01 pm