ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಸಂಗಮ ರಥಯಾತ್ರೆಗೆ ಅದ್ಧೂರಿ ಸ್ವಾಗತ - 62 ಹಳ್ಳಿಗಳಲ್ಲಿ ಸಂಚರಿಸಲಿದೆ ಯಾತ್ರೆ

ಧಾರವಾಡ: ಹುಬ್ಬಳ್ಳಿಯ ಸಿದ್ಧಾರೂಢರು, ಗರಗದ ಮಡಿವಾಳಪ್ಪನವರು, ನವಲಗುಂದದ ಅಜಾತ ನಾಗಲಿಂಗ ಸ್ವಾಮೀಜಿ, ಉಣಕಲ್ಲಿನ ಸಿದ್ದಪ್ಪಜ್ಜನವರು, ಸಂತ ಶಿಶುನಾಳ ಶರೀಫ ಶಿವಯೋಗಿಗಳು ಹಾಗೂ ಗುರುನಾಥಾರೂಢರ ಆರು ಉತ್ಸವ ಮೂರ್ತಿಗಳು ಹಾಗೂ ಆರು ಅಂಬಾರಿಗಳನ್ನು ಮನೋಜಕುಮಾರ ಗದಗಿನ ಎಂಬುವರು ನಿರ್ಮಿಸಿಕೊಟ್ಟಿದ್ದು, ಆ ಮೂರ್ತಿಗಳ ಸಮೇತ ಅಂಬಾರಿ ಮೆರವಣಿಗೆಯ ಸಂಗಮ ರಥಯಾತ್ರೆ ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸುತ್ತಿದೆ.

ಈ ಸಂಗಮ ರಥಯಾತ್ರೆ ಸೋಮವಾರ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಬಂದು ತಲುಪಿತು. ಅಂಬಾರಿ ಸಮೇತ ಸಿದ್ಧಾರೂಢರ ಸಮಕಾಲೀನರಾದ ಆರೂ ಮೂರ್ತಿಗಳನ್ನು ಹೊತ್ತ ಟ್ರ್ಯಾಕ್ಟರ್‌ಗಳಿಗೆ ಉಪ್ಪಿನ ಬೆಟಗೇರಿ ಗ್ರಾಮದ ಹಿರಿಯರು ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಕರಡಿ ಮಜಲು, ಭಜನೆ ಮೇಳ ಹಾಗೂ ಕುಂಭ ಮೇಳದೊಂದಿಗೆ ಆರೂ ಮೂರ್ತಿಗಳನ್ನು ಭವ್ಯ ಮೆರವಣಿಗೆ ಮಾಡಲಾಯಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಈ ಸಂಗಮ ರಥಯಾತ್ರೆ ಸಂಚರಿಸಿ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಬಂದು ತಲುಪಿ ಅಲ್ಲಿಂದ ಲೋಕೂರು ಗ್ರಾಮಕ್ಕೆ ತೆರಳಿತು.

ಸಿದ್ಧಾರೂಢರು ಹಾಗೂ ಅವರ ಸಮಕಾಲೀನರನ್ನು ಪರಿಚಯಿಸುವ ದೃಷ್ಟಿಯಿಂದ ಸಿದ್ಧಾರೂಢರು ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಈ ಸಂಗಮ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆ ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸಲಿದೆ. ಒಟ್ಟು 24 ದಿನಗಳ ಕಾಲ ಈ ಸಂಗಮ ರಥಯಾತ್ರೆ ಸಂಚರಿಸಿ, ಕೊನೆಗೆ ಡಿಸೆಂಬರ್‌ 8 ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ತೆರಳಿ ಮುಕ್ತಾಯಗೊಳ್ಳಲಿದೆ. ಮನೋಜಕುಮಾರ ಗದಗಿನ ಎಂಬುವರು ಈ ಟ್ರಸ್ಟ್ ಕಮಿಟಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಈ ಸಂಗಮ ರಥಯಾತ್ರೆಯ ಆಯೋಜಕರೂ ಆಗಿದ್ದಾರೆ. 24 ದಿನಗಳ ಕಾಲ ಈ ಉತ್ಸವ ಮೂರ್ತಿಗಳು ಧಾರವಾಡ ಜಿಲ್ಲೆಯ 62 ಹಳ್ಳಿಗಳಲ್ಲಿ ಸಂಚರಿಸಿ ಸಿದ್ಧಾರೂಢರ ಸಮಕಾಲೀನರ ಮಹತ್ವಗಳನ್ನು ಸಾರಲಿವೆ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/12/2024 07:18 pm

Cinque Terre

135.51 K

Cinque Terre

8

ಸಂಬಂಧಿತ ಸುದ್ದಿ