ಖಾನಾಪುರ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸವಾರನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಯಡೋಗಾ ಕ್ರಾಸ್‌ಬಳಿ ನಡೆದಿದೆ.
ದೊಡ್ಡ ಹೊಸೂರು ಗ್ರಾಮದ ನಿವಾಸಿ ಗೋವಿಂದ್ ಗೋಪಾಲ್ ತಿವೋಲ್ಕರ್ (ವಯಸ್ಸು 25) ಮೃತ ಯುವಕ. ಖಾನಾಪುರ ಕೆಎಸ್‌ಆರ್‌ಟಿಸಿ ಡಿಪೋ ಬಸ್ ಚಾಪಗಾಂವದಿಂದ ಯಡೋಗಾ ಮಾರ್ಗವಾಗಿ ಖಾನಾಪುರಕ್ಕೆ ಬರುತ್ತಿತ್ತು. ಇತ್ತ ಯುವಕ ಗೋವಿಂದ್ ದೊಡ್ಡ ಹೊಸೂರು ಗ್ರಾಮಕ್ಕೆ ಹೋಗುತ್ತಿದ್ದಾಗ ಯಡೋಗಾ ಕ್ರಾಸ್ ಬಳಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಬಗ್ಗೆ ಮಾಹಿತಿ ಪಡೆದ ಖಾನಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ ನಾಯಕ್ ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಯುವಕ ಗೋವಿಂದ್ ಮಹಾರಾಷ್ಟ್ರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದ. ವೈಯಕ್ತಿಕ ಕೆಲಸಕ್ಕಾಗಿ ಗ್ರಾಮಕ್ಕೆ ಬಂದಿದ್ದ. ಯುವಕನ ಆಕಸ್ಮಿಕ ಸಾವಿನಿಂದ ದೊಡ್ಡೋಸೂರ ಗ್ರಾಮದಲ್ಲಿ ಶೋಕದ ವಾತಾವರಣ ಮೂಡಿದೆ.
ವರದಿ: ನಾಗೇಶ ನಾಯ್ಕರ ಪಬ್ಲಿಕ್ ನೆಕ್ಸ್ಟ್ ಖಾನಾಪುರ
PublicNext
29/11/2024 10:42 am