ಕುಂದಗೋಳ : ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ ಬಡ-ಮಧ್ಯಮ ವರ್ಗದವರಿಗೆ ಆರ್ಥಿಕ ನೆರವು ತಂದರೂ ಹೊಸಬರಿಗೆ ಈ ಸೌಲಭ್ಯ ಮರೀಚಿಕೆ ಆಗಿವೆ.
ಹೌದು ! ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರದಿಂದ ಸೂಕ್ತ ನಿರ್ದೇಶನ ಸಿಗದೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ಮತ್ತು ಹೆಸರು ಸೇರ್ಪಡೆ ಮಾಡುವವರಿಗೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ನೋಂದಣಿ ಸಮಸ್ಯೆಯಾಗಿದೆ.
ಸರ್ಕಾರಿ ಮಟ್ಟದಲ್ಲಿ ಹೊಸ ರೇಷನ್ ಕಾರ್ಡ್ ಮತ್ತು ಹೆಸರು ಸೇರ್ಪಡೆ ಆದೇಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಹೆಸರು ಸೇರ್ಪಡೆ, ಹೆಸರು ಬದಲಾವಣೆ ಮಾಡುವವರು ಸೇರಿ ಕುಂದಗೋಳ ತಾಲೂಕಿನಲ್ಲಿ ಒಟ್ಟು 2677 ಅರ್ಜಿ ವಿಲೇವಾರಿ ಆಗದೆ ಬಾಕಿ ಉಳಿದಿವೆ.
2021 ಕ್ರಮವಾಗಿ 2024 ರವರೆಗೆ ಹೊಸ ಪಡಿತರ ಚೀಟಿಗೆ 468 ಅರ್ಜಿ ಸಲ್ಲಿಕೆಯಾದರೂ ಇಂದಿಗೂ ವಿಲೇವಾರಿ ಆಗಿಲ್ಲ. ಹೊಸ ಕಾರ್ಡ್ ಫಲಾನುಭವಿಗಳಿಗೆ ದೊರೆತಿಲ್ಲ.
ಪ್ರಸ್ತುತ ಕುಂದಗೋಳ ತಾಲೂಕಿನಲ್ಲಿ 1441 ಎಪಿಎಲ್, 38881 ಬಿಪಿಎಲ್, 4479 ಅಂತ್ಯೋದಯ ಪಡಿತರ ಕಾರ್ಡ್ ಗಳಿದ್ದು, ಈ ಪೈಕಿ 1729 ರೇಷನ್ ಕಾರ್ಡ್ ಫಲಾನುಭವಿಗಳಿಗೆ ಪ್ರಸ್ತುತ ವರ್ಷ ಮೇ ತಿಂಗಳ ಅನ್ನಭಾಗ್ಯದ ಡಿಬಿಟಿ ಹಣ ಸಹ ಬಂದಿಲ್ಲ. ಒಟ್ಟಾರೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವ ಅರ್ಹತೆ ಇದ್ದರೂ ಕೆಲವು ಕುಟುಂಬ ರೇಷನ್ ಕಾರ್ಡ್ ಇಲ್ಲದೆ ವಂಚಿತವಾಗಿವೆ.
ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್, ಕುಂದಗೋಳ
Kshetra Samachara
14/11/2024 04:45 pm