ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಾಜ್ಯದಲ್ಲಿ ಶಕ್ತಿ ಯೋಜನೆಗೆ ಹೆಚ್ಚಿದ ಬಲ - ವರ್ಷದಿಂದ ವರ್ಷಕ್ಕೆ ಹೆಚ್ಚಿದ ಪ್ರಯಾಣಿಕರ ಸಂಖ್ಯೆ

ಹುಬ್ಬಳ್ಳಿ: ರಾಜ್ಯದಲ್ಲಿ 'ಶಕ್ತಿ' ಯೋಜನೆ ಅನುಷ್ಠಾನವಾದ ಬಳಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಆರ್‌ಟಿಸಿ) ಬಸ್‌ಗಳಲ್ಲಿ ಎಲ್ಲ ಸೀಟುಗಳು ಭರ್ತಿಯಾಗುತ್ತಿವೆ. ಕಳೆದ ವರ್ಷ ಸಂಚರಿಸಿದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಈ ವರ್ಷ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ವೃದ್ಧಿಸಿದೆ.

ಅತಿ ಹೆಚ್ಚು ವಿಸ್ತಾರ ಮತ್ತು ಜನಸಂಖ್ಯೆಯುಳ್ಳ ಬೆಳಗಾವಿ ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. 2023ನೇ ಸಾಲಿನ ಸೆಪ್ಟೆಂಬರ್‌ನಲ್ಲಿ ಸಂಚರಿಸಿದ್ದ ಒಟ್ಟು ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ಶೇ 11ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸಿದ್ದಾರೆ.

ವಾಯವ್ಯ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ ಪೈಕಿ ಗದಗ ಹೊರತುಪಡಿಸಿ ಇನ್ನುಳಿದ ಎಲ್ಲ ಜಿಲ್ಲೆಗಳಲ್ಲೂ ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಏರುಗತಿಯಲ್ಲಿದೆ. 2023-24ನೇ ಸಾಲಿನಲ್ಲಿ ಸರ್ಕಾರದಿಂದ ಬರಬೇಕಿದ್ದ ಮಹಿಳೆಯರ ಉಚಿತ ಪ್ರಯಾಣದ ಮೊತ್ತದಲ್ಲಿ ಶೇ 82ರಷ್ಟು ಅನುದಾನ ಸಂದಾಯವಾಗಿದೆ.

'ಶಕ್ತಿ ಯೋಜನೆಯಿಂದ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಿಲ್ಲ. ಆದರೆ, ನಷ್ಟದ ಪ್ರಮಾಣ ಕಡಿಮೆಯಾಗುತ್ತಿದೆ' ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದರು. ಯೋಜನೆ ಆರಂಭವಾದಾಗಿನಿಂದ ಈವರೆಗೆ (2024 ಸೆಪ್ಟೆಂಬ‌ರ್ ಕೊನೆ) ಒಟ್ಟು 69.35 ಕೋಟಿ ಪ್ರಯಾಣಿಕರು ಉಚಿತ ಸಂಚಾರ ಮಾಡಿದ್ದಾರೆ.

ಅದರಲ್ಲಿ ಮೂರು ವಿಭಾಗಗಳಿರುವ ಧಾರವಾಡ ಜಿಲ್ಲೆಯಲ್ಲಿ ಶೇ 28.16 ಪ್ರಯಾಣಿಕರು ಸಂಚರಿಸಿದ್ದರೆ, ಎರಡು ವಿಭಾಗಗಳಿರುವ ಬೆಳಗಾವಿ ಜಿಲ್ಲೆಯಲ್ಲಿ ಶೇ 29.79 ಪ್ರಯಾಣಿಕರು ಸಂಚರಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಶೇ 12.37, ಹಾವೇರಿ ಜಿಲ್ಲೆಯಲ್ಲಿ ಶೇ 11.11 ಹಾಗೂ ಗದಗ ಜಿಲ್ಲೆಯಲ್ಲಿ ಶೇ 9.65 ರಷ್ಟು ಪ್ರಯಾಣಿಕರು ಮತ್ತು ಕೊನೆ ಸ್ಥಾನದಲ್ಲಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 8.89 ರಷ್ಟು ಪ್ರಯಾಣಿಕರು ಸಂಚರಿಸಿದ್ದಾರೆ.

Edited By : Suman K
Kshetra Samachara

Kshetra Samachara

14/11/2024 05:55 pm

Cinque Terre

30.43 K

Cinque Terre

7

ಸಂಬಂಧಿತ ಸುದ್ದಿ