ಹುಬ್ಬಳ್ಳಿ: ಅದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜನರಿಗೆ ಸ್ಮಾರ್ಟ್ ಹೆಲ್ತ್ ನೀಡುವ ಬಹುದೊಡ್ಡ ಯೋಜನೆ. 2019ರಲ್ಲಿಯೇ ಇಡೀ ದೇಶದ ಗಮನ ಸೆಳೆದು, ಕೇಂದ್ರ ಸರ್ಕಾರದಿಂದ ಕೊಡ ಮಾಡುವ ಅತ್ಯಂತ ಒಳ್ಳೆಯ ಯೋಜನೆ ಅಂತ ಪ್ರಶಸ್ತಿ ಕೂಡ ಪಡೆದಿತ್ತು. ಆದರೆ, ಇಂತಹದೊಂದು ಯೋಜನೆ ಕೇವಲ ದಾಖಲೆಗೆ ಮಾತ್ರವೇ ಸೀಮಿತವಾಗಿದೆ ಎಂಬ ಆರೋಪ ದಟ್ಟವಾಗಿದೆ. ಈ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಬೆಳಕು ಚೆಲ್ಲಿದ ಬೆನ್ನಲ್ಲೇ ಸಾಮಾನ್ಯ ಸಭೆಯಲ್ಲಿ ತನಿಖೆಗೆ ಆದೇಶ ನೀಡಿದ್ದು, ಇದುವರೆಗೂ ಯಾವುದೇ ತನಿಖಾ ತಂಡ ಕೂಡ ರಚನೆಯಾಗಿಲ್ಲ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯು ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಹೆಲ್ತ್ ಕೇರ್ ಸಿಸ್ಟಮ್ ಪರಿಚಯಿಸಿದ್ದು, 3.1 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಆದಾಗ್ಯೂ, ವ್ಯವಸ್ಥೆಯು ಕಣ್ಮರೆಯಾಗಿದ್ದು, ದಾಖಲೆಗಳಿಗೆ ಮಾತ್ರ ಸೀಮಿತವಾಗಿರುವ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯೊಂದನ್ನು ಬಿತ್ತರಿಸಿದ ಬೆನ್ನಲ್ಲೇ ಸಾಮಾನ್ಯ ಸಭೆಯಲ್ಲಿ ತನಿಖಾ ತಂಡ ರಚನೆ ಮಾಡಿ ಈ ಬಗ್ಗೆ ತನಿಖೆ ನಡೆಸಲು ಠರಾವ್ ಮಾಡಲಾಗಿತ್ತು.
ಆದರೆ, ಇದುವರೆಗೂ ಯಾವುದೇ ತನಿಖಾ ಸಮಿತಿಯು ರಚನೆಯಾಗಿಲ್ಲ. ಯೋಜನೆ ಅನುಷ್ಠಾನದ ಪ್ರಕಾರ ಇಲ್ಲಿ ಬರುವ ರೋಗಿ ಮೊದಲು ಡಿಜಿಟಲ್ ನೋಂದಣಿ ಮಾಡಿಸಬೇಕು. ನಂತರ ಅದು ಸಂಬಂಧಿತ ವೈದ್ಯರಿಗೆ ಡಿಜಿಟಲ್ ರವಾನೆಯಾಗುತ್ತದೆ. ವೈದ್ಯರು ತಪಾಸಣೆ ಮಾಡಿ ಔಷಧಿ, ವಿವಿಧ ತಪಾಸಣೆಯನ್ನು ಕಂಪ್ಯೂಟರ್ ಮೂಲಕವೇ ಸೂಚಿಸಬೇಕಾಗುತ್ತದೆ. ಔಷಧಿಯೂ ಕೂಡ ನೋಂದಣಿ ಪತ್ರದ ಮೇಲಿರುವಂತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣವೇ ವೆಂಡಿಂಗ್ ಮಷಿನ್ ಮೂಲಕ ಪಡೆಯಬಹುದಾಗಿರುತ್ತದೆ. ಆದರೆ, ಸ್ಮಾರ್ಟ್ ಹೆಲ್ತ್ ಯೋಜನೆ ಅವ್ಯವಸ್ಥೆ ಆಗರವಾಗಿದ್ದು, ಇನ್ನೂ ತನಿಖೆ ನೆನೆಗುದಿಗೆ ಬಿದ್ದಿದೆ.
ಒಟ್ಟಿನಲ್ಲಿ ಈ ಬಗ್ಗೆ ಕೂಲಂಕುಷ ತನಿಖೆಯಾಗಬೇಕಿದೆ. ಈ ವ್ಯವಸ್ಥೆ ನಿಲ್ಲಿಸಿದ್ದು ಏಕೆ? ಸಾರ್ವಜನಿಕರ ಕೋಟ್ಯಾಂತರ ಹಣವನ್ನು ಖರ್ಚು ಮಾಡಿ ಜಾರಿಗೆ ತಂದಿರುವ ವ್ಯವಸ್ಥೆ ಜನರಿಗೆ ದೊರೆಯದೇ ಇರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
- ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/11/2024 06:49 pm