ಹುಬ್ಬಳ್ಳಿ: ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಪ್ರಾರಂಭ ಮಾಡಿರುವುದಕ್ಕೆ ಈಗಾಗಲೇ ನವನಗರದ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಮದ್ಯದ ಅಂಗಡಿಗೆ ಬೀಗ್ ಹಾಕುವಂತೆ ಮಾಡಿದ್ದರು.
ಆದರೆ ಇದೀಗ ಬಾರ್ ಮಾಲೀಕರು ಕೋರ್ಟ್ ಮೊರೆ ಹೋಗಿ ಪುನಃ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಇದೇ ವಿಷಯ ಇದೀಗ ಸಾರ್ವಜನಿಕರ ಕಂಗೆಣ್ಣಿಗೆ ಮತ್ತಷ್ಟು ಗುರಿಯಾಗಿದ್ದು, ಕೂಡಲೇ ಬಾರ್ ಸ್ಥಳಾಂತರ ಮಾಡಬೇಕೆಂದು ನವನಗರದ ಸ್ಥಳೀಯ ನಿವಾಸಿಗಳು ದಿಢೀರ್ ಪ್ರತಿಭಟನೆ ಮಾಡಿದರು.
ಈಗಾಗಲೇ ಬಾರ್ ಆರಂಭಕ್ಕೂ ಮುನ್ನವೇ ಸಾರ್ವಜನಿಕರು ಸಭೆ ನಡೆಸಿ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡದಂತೆ ತೀರ್ಮಾನ ಕೈಗೊಂಡಿದ್ದಾರೆ. ಈ ವಿಷಯವನ್ನು ಬಾರ್ ಮಾಲೀಕರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಮದ್ಯದ ಅಂಗಡಿ ಸ್ಥಳಾಂತರ ಮಾಡಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿಗಳು, ಅಬಕಾರಿ ಆಯುಕ್ತರು, ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಆದರೂ ಸಹ ಮದ್ಯದ ಅಂಗಡಿ ಆರಂಭ ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಈ ಬಗ್ಗೆ ಕಾನೂನು ಹೋರಾಟ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಇನ್ನು ನವನಗರದಲ್ಲಿ ಆರಂಭ ಆಗಿರುವ ನೂತನ ಮದ್ಯದ ಅಂಗಡಿ ಜನವಸತಿ ಪ್ರದೇಶದಲ್ಲಿದೆ, ಅದರಂತೆ ಕ್ಯಾನ್ಸರ್ ಆಸ್ಪತ್ರೆ ಮುಂಭಾಗದ ಗಾರ್ಡನ್ ಹತ್ತಿರ ಸಂಗಮ್ ಬಾರ್ & ರೆಸ್ಟಾರೆಂಟ್ ಕೂಡ ಇರುವುದು. ಇವುಗಳ ಸುತ್ತಮುತ್ತ ಶಾಲೆ, ಕಾಲೇಜುಗಳಿವೆ. ಹೀಗಾಗಿದ್ದಾಗ ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಬಾರ್ ಮುಂದೆಯೇ ಓಡಾಡುವಂತಾಗಿದೆ.
ಇದು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಹೀಗಾಗಿ ಕೂಡಲೇ ಮದ್ಯದ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕೆಂದು ಆಗ್ರಹಿಸಿದರು. ಅಷ್ಟೇ ಅಲ್ಲದೇ ಮುಂದಿನ ಒಂದು ವಾರ ಶಾಂತಿಯುತ ಪ್ರತಿಭಟನೆ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಸ್ಥಳಾಂತರವಾಗದೇ ಇದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ನವನಗರದಲ್ಲಿ ನೂತನವಾಗಿ ಆರಂಭವಾಗಿರುವ ಮದ್ಯದ ಅಂಗಡಿಯಿಂದಾಗಿ ಸಾರ್ವಜನಿಕರು ಹಾಗೂ ಮದ್ಯದ ಅಂಗಡಿ ಮಾಲೀಕರ ನಡುವೆ ಜಟಾಪಟಿ ಏರ್ಪಟ್ಟಿದ್ದು, ಇದು ಯಾವ ಹಂತಕ್ಕೆ ಹೋಗಿ ತಲುಪುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/11/2024 08:55 pm