ಹುಬ್ಬಳ್ಳಿ: ಪೊಲೀಸ್ ಅಂದ್ರೆ ಸಾಕು ನಮಗೆ ತಟ್ಟನೆ ನೆನಪಿಗೆ ಬರೋದು ನಮ್ಮನ್ನು ಕಾಯುವ ರಕ್ಷಕರು. ಹಗಲು ರಾತ್ರಿ ಎನ್ನದೇ ಸಮಾಜದ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಾಣವನ್ನು ಲೆಕ್ಕಿಸದೆ ಹಗಲು- ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಆದ್ರೆ ಇದೀಗ ಕೆಲವೊಂದಿಷ್ಟು ರಾಜಕೀಯ ಬೆಂಬಲಿತ ವ್ಯಕ್ತಿಗಳು ಖಾಕಿ ಮೇಲೆಯೇ ಕೈ ಮಾಡುವುದಲ್ಲದೆ, ಕೊಲೆಗೆ ಯತ್ನಿಸಿದ್ದಾರೆ. ಹೀಗಾಗಿ ಖಾಕಿ ಮೇಲೆ ಕೈ ಮಾಡಿದವರನ್ನು ಎನ್ಕೌಂಟರ್ ಮಾಡಬೇಕು ಅಂತಾ ಪೊಲೀಸ್ ಕಮಿಷನರ್ ಅವರಿಗೆ ಸಂಘಟನೆ ಮನವಿ ಮಾಡಿದೆ. ಹಾಗಾದ್ರೆ, ಇದೇನಿದು ಪೊಲೀಸರ ಮೇಲೆ ರಾಜಕೀಯದ ದರ್ಪ ಅಂತೀರಾ, ಈ ಸ್ಟೋರಿ ನೋಡಿ...
ಹೀಗೆ ಮುಖದ ಮೇಲೆ ಬ್ಲೇಡ್ ನಿಂದ ಆಗಿರುವ ಗಾಯವನ್ನು ಮಾಧ್ಯಮದ ಮುಂದೆ ತೋರಿಸುತ್ತಿರೋ ಈತನ ಹೆಸರು ಬಸವರಾಜ. ಧಾರವಾಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಕಳೆದ ರವಿವಾರ ಧಾರವಾಡದ ಐಸ್ ಗೇಟ್ ಬಳಿಯಲ್ಲಿ ರಸ್ತೆಯಲ್ಲಿ ನಿಂತಿದ್ದ ಕಾರನ್ನು ತೆಗೆಯಿರಿ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ಮುಖಂಡನ ತಮ್ಮ ಹಾಗೂ ಆತನ ಸಹಚರರು ಕಾನ್ಸ್ಟೇಬಲ್ ಮೇಲೆ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾರೆ!
ಘಟನೆಗೆ ಸಂಬಂಧಿಸಿದಂತೆ ಕಮಿಷನರ್ ಎನ್. ಶಶಿಕುಮಾರ್ ಆರೋಪಿಗಳಾದ ಇಕ್ಬಾಲ್, ಅಜಮತ್ ಹಾಗೂ ಅಮೀರ್ ಎಂಬುವರನ್ನು ಕೊಲೆ ಯತ್ನದ ಪ್ರಕರಣದಲ್ಲಿ ಜೈಲಿಗೆ ಕಳುಹಿಸಿದ್ದಾರೆ. ಆದ್ರೆ, ಈ ಪುಂಡರ ಹಾವಳಿ ಪೊಲೀಸರ ಮೇಲೆಯೇ ಇಷ್ಟು ಇರುವಾಗ ಜನಸಾಮಾನ್ಯರ ಮೇಲೆ ಇವರ ದರ್ಪ ಹೇಗಿರಬಹುದು!? ಹೀಗಾಗಿ ಈ ಮೂವರನ್ನು ಎನ್ಕೌಂಟರ್ ಮಾಡಬೇಕು ಅಂತಾ ಕಮಿಷನರ್ ಗೆ ಜೈ ಭೀಮ್ ಯುವ ಸಂಘದ ವತಿಯಿಂದ ಮನವಿ ಸಲ್ಲಿಸಲಾಗಿದೆ.
ಇನ್ನು, ಕಾಂಗ್ರೆಸ್ ಸರ್ಕಾರ ಬಂದಾಗ ಪೊಲೀಸರ ಮೇಲೆ ಈ ರೀತಿಯಾದ ಹಲ್ಲೆ ದೌರ್ಜನ್ಯ ನಡೆದುಕೊಂಡು ಬರುತ್ತಲೇ ಇದೆ. ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ರಾಜ್ಯ ಸರ್ಕಾರ ರಕ್ಷಣೆ ಮಾಡಿದೆ. ಹೀಗಾಗಿ ಸಾರ್ವಜನಿಕರನ್ನು ರಕ್ಷಣೆ ಮಾಡುವಂತಹ ಆರಕ್ಷಕರಿಗೆ ರಕ್ಷಣೆ ಇಲ್ಲ ಎಂದು ಜೈ ಭೀಮ್ ಯುವ ಸಂಘದ ವಿಶ್ವನಾಥ್ ಹೇಳಿದ್ದು ಹೀಗೆ...
ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸದಾ ಶ್ರಮಿಸುತ್ತಿರೋ ಖಾಕಿ ಮೇಲೆ ರಾಜಕೀಯ ಎಂಬ ಕರಿ ಛಾಯೆ ಆವರಿಸಿ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕಾರ್ಯ ಇನ್ನು ಮೇಲಾದ್ರೂ ಕಡಿಮೆ ಆಗಬೇಕು ಎಂಬುದೇ ಸಾರ್ವಜನಿಕರ ಆಶಯವಾಗಿದೆ.
-ವಿನಯ ರೆಡ್ಡಿ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/11/2024 07:22 pm