ಧಾರವಾಡ: ಫೋಟೋದಲ್ಲಿರುವ ಈ ರೈತನ ಹೆಸರು ಅಡಿವೆಪ್ಪ ತಡಕೋಡ (57) ಅಂತಾ. ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ತಲೆಮೊರಬ ಗ್ರಾಮದ ನಿವಾಸಿ. ಮಂಗಳವಾರ ರಾತ್ರಿ ತನ್ನ ಮನೆ ಪಕ್ಕದ ಶೆಡ್ನಲ್ಲಿ ಮಲಗಿದವನು ಮಲಗಿದಲ್ಲಿಯೇ ಹೆಣವಾಗಿ ಹೋಗಿದ್ದಾನೆ.
ನಿತ್ಯ ಈ ಶೆಡ್ನಲ್ಲಿ ಈತನ ಸಣ್ಣ ಮಗ ಮಲಗಿಕೊಳ್ಳುತ್ತಿದ್ದ. ಆದರೆ ನಿನ್ನೆಯಷ್ಟೇ ಹತ್ತಿ ತುಂಬಿದ ಚೀಲಗಳನ್ನು ಮನೆ ಪಕ್ಕ ತಂದಿಡಲಾಗಿತ್ತು. ಹೀಗಾಗಿ ಶೆಡ್ನಲ್ಲಿ ನಾನೇ ಮಲಗುವೆ. ನೀನು ಮನೆಯಲ್ಲಿ ಮಲಗು ಅಂತಾ ಮಗನಿಗೆ ಹೇಳಿ ತಾನೇ ಶೆಡ್ನಲ್ಲಿ ಮಲಗಿದ್ದ. ನಿತ್ಯ ಅಡಿವೆಪ್ಪ ಬೆಳಿಗ್ಗೆ 5 ಕ್ಕೆ ಎದ್ದು ಮನೆಯಂಗಳ ಗುಡಿಸುತ್ತಿದ್ದ. ಬುಧವಾರ ಬೆಳಕಾದರೂ ಆತ ಎದ್ದಿರಲೇ ಇಲ್ಲ.
ಆತನ ಪತ್ನಿ ಶೆಡ್ ಬಾಗಿಲು ತೆಗೆಯಲು ಹೋದಾಗ ಬಾಗಿಲು ತೆರೆದೇ ಇತ್ತು. ಒಳ ಹೋಗಿ ನೋಡಿದ್ರೆ ಮುಸುಕು ಹಾಕಿಕೊಂಡೇ ಮಲಗಿದ್ದಾನಲ್ಲ ಎಂದುಕೊಂಡು, ಮುಸುಕು ಎಳೆದು ನೋಡಿದ್ರೆ ಮುಖವೆಲ್ಲ ರಕ್ತವಾಗಿತ್ತು. ಹೆದರಿ ಓಡೋಡಿ ಹೊರಬಂದ ಪತ್ನಿ ಮಕ್ಕಳಿಗೆ ಸುದ್ದಿ ಮುಟ್ಟಿಸಿದ್ದಾಳೆ. ಆಗ ಮಕ್ಕಳೆಲ್ಲ ಬಂದು ನೋಡಿದ್ರೆ, ಅಡಿವೆಪ್ಪನ ಕೊಲೆಯಾಗಿರೋದು ಗೊತ್ತಾಗಿದೆ.
ಅಡಿವೆಪ್ಪನನ್ನು ಪ್ಲ್ಯಾನ್ ಮಾಡಿ ಕೊಲೆ ಮಾಡಿದ್ದಾರಾ? ಅನ್ನೋ ಸಂಶಯ ಮೂಡುತ್ತಿದೆ. ಅಲ್ಲದೇ ನಿತ್ಯ ಈ ಸ್ಥಳದಲ್ಲಿ ಮಲಗಿಳ್ಳುತ್ತಿದುದು ಅಡಿವೆಪ್ಪನ ಕಿರಿಯ ಪುತ್ರ ಈರಪ್ಪ. ಆದರೆ, ನಿನ್ನೆ ಮಾತ್ರ ತಂದೆ ಅಡಿವೆಪ್ಪ ಆ ಸ್ಥಳದಲ್ಲಿ ಮಲಗಿದ್ದ. ಹೀಗಾಗಿ ಮಗನ ಮೇಲಿನ ಸೇಡಿಗೆ ಯಾರಾದರೂ ಹೀಗೆ ಮಾಡಿದ್ದಾರಾ ಎಂದು ನೋಡಿದ್ರೆ, ಊರಲ್ಲಿ ಯಾರ ಜೊತೆಯೂ ಆತನ ಜಗಳ ಇರಲಿಲ್ಲವಂತೆ. ಇನ್ನು ಊರಲ್ಲಿ ಒಬ್ಬರು ರಾತ್ರಿ ನಿಧನರಾಗಿದ್ದರು. ಮಧ್ಯರಾತ್ರಿ ಅವರ ಅಂತ್ಯಸಂಸ್ಕಾರಕ್ಕೆ ಹೋಗಿ ಬಂದಾಗ ಮನೆಯಲ್ಲಿ ಕರೆಂಟ್ ಇರಲಿಲ್ಲವಂತೆ. ಅಕ್ಕಪಕ್ಕದ ಮನೆಯಲ್ಲಿ ಕರೆಂಟ್ ಇತ್ತು. ಹೀಗೇಕೆ ಅಂತಾ ನೋಡಿದ್ರೆ ಯಾರೋ ಫ್ಯೂಸ್ ತೆಗೆದಿಟ್ಟಿದ್ದರಂತೆ. ಇದಾದ ಮೇಲೆ ತಡರಾತ್ರಿ ಇಡೀ ಊರಿನ ಕರೆಂಟ್ ಕೂಡ ಹೋಗಿದೆ. ಬೆಳಿಗ್ಗೆ ನೋಡಿದ್ರೆ ಇಡೀ ಊರಿನ ಪ್ಯೂಸ್ನ್ನೇ ಕಟ್ ಮಾಡಿದ್ರಂತೆ. ಹೀಗಾಗಿ ಇದು ಪ್ಲ್ಯಾನ್ ಮಾಡಿ ಮಾಡಿರೋ ಮರ್ಡರ ಅಂತಾನೇ ಹೇಳಲಾಗುತ್ತಿದೆಯಾದರೂ, ನಮಗೆ ಯಾರ ಮೇಲೂ ಸಂಶಯ ಇಲ್ಲ ಅನ್ನೋದು ಮನೆಯವರ ಹೇಳಿಕೆ.
ದುರಂತ ಅಂದ್ರೆ ಅಡಿವೆಪ್ಪನ ಹಿರಿಯ ಪುತ್ರನಿಗೆ ತುಂಬಾ ದಿನಗಳ ಬಳಿಕ ಕಂಕಣ ಭಾಗ್ಯ ಕೂಡಿ ಬಂದಿತ್ತು. ಬುಧವಾರ ಹುಡುಗಿ ನೋಡಲು ಹೋಗುವ ಶಾಸ್ತ್ರವೂ ನಡೆಯುವುದಿತ್ತು. ಆದರೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ನವಲಗುಂದ ಠಾಣೆ ಪೊಲೀಸರು, ಕೊಲೆಗಾರರ ಪತ್ತೆಗೆ ಜಾಲ ಬೀಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
13/11/2024 09:58 pm