ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆಲ್ಲಲೇ ಬೇಕೆಂದು ಓಡುವಾಗ ಬ್ಯಾಲೆನ್ಸ್ ತಪ್ಪಿ ಬಿದ್ದರೂ ಲೆಕ್ಕಿಸದೇ ಮತ್ತೆ ಎದ್ದು ಓಡುವ ಮಕ್ಕಳ ಛಲ ನಿಜಕ್ಕೂ ಮೆಚ್ಚುವಂತಿತ್ತು.

ಎಲ್ಲೆಡೆ ಚಿಣ್ಣರ ಕಲರವ, ಟೆಂಟ್ ಗಳಲ್ಲಿ ಕುಳಿತು ತಮ್ಮ ತಮ್ಮ ಮಕ್ಕಳಿಗೆ ಸಲಹೆ ಸೂಚನೆ ನೀಡುವ ಪಾಲಕರು, ಸ್ಪರ್ಧೆಯಲ್ಲಿ ಪಾಲ್ಗೊಂಡು ಆಯಾಸದಿಂದ ತಾಯಿ ಮಡಿಲಲ್ಲಿ ವಿಶ್ರಾಂತಿ ಪಡೆಯುವ ಸರ್ಧಾಳುಗಳ ದೃಶ್ಯ ಅಲ್ಲಿ ಸಾಮಾನ್ಯವಾಗಿತ್ತು.

ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಹಾಗೂ ಧಾರವಾಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗಾಗಿ ಗದಗ ರಸ್ತೆ ಒಂಟಿ ಹನುಮಂತನ ದೇವಸ್ಥಾನದ ಬಳಿಯ ದತ್ತಾ ಪ್ರಾಪರ್ಟಿಸ್ ಲೇಔಟ್ ದಲ್ಲಿ ಒಂದು ಚಿಕ್ಕ ಗ್ರಾಮವೇ ಸೃಷ್ಟಿಯಾದಂತಿತ್ತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 300 ಬಾಲಕ ಬಾಲಕಿಯರು 4th Ranking ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಇನ್ ಲೈನ್ ಹಾಗೂ ಕ್ವಾರ್ಡ್ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಖ್ಯಾತ ಸ್ಕೇಟಿಂಗ್ ಹಾಗೂ ಯೋಗ ತರಬೇತುದಾರರಾದ ಈರಣ್ಣ ಕಾಡಪ್ಪನವರ ಹಾಗೂ ಮಲ್ಲಿಕಾರ್ಜುನ ಕಾಡಪ್ಪನವರ ಉಸ್ತುವಾರಿಯಲ್ಲಿ ಸ್ಕೇಟಿಂಗ್ ಸ್ಪರ್ಧೆ ಅತ್ಯಂತ ಯಶಸ್ವಿಯಾಗಿ ಜರುಗಿತು.

ಎರಡನೇ ದಿನ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಸ್ಪರ್ಧಾ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು ಹಾಗೂ ಸ್ಪರ್ಧೆ ಏರ್ಪಡಿಸಿದ ಕಾಡಪ್ಪನವರ ಹಾಗೂ ಅವರ ತಂಡವನ್ನು ಅಭಿನಂದಿಸಿದರು.

ಅದೇ ದಿನ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪಬ್ಲಿಕ್ ನೆಕ್ಸ್ಟ್ ಪ್ರಧಾನ ಸಂಪಾದಕ ಕೇಶವ ನಾಡಕರ್ಣಿ ಅವರಿಗೆ ಈರಣ್ಣ ಕಾಡಪ್ಪನವರ, ಸ್ಪರ್ಧೆಯ ಸಮಗ್ರ ಮಾಹಿತಿ ನೀಡಿದರು. ವಸಂತ ಭಸ್ಮೆ, ಜಗದೀಶ ಜಕರಡ್ಡಿ ಹಾಗೂ ಇತರರು ಸಹಕಾರ ನೀಡಿದರು.

ಧಾರವಾಡ ಜಿಲ್ಲಾ ಕೋಚ್ ಶಶಿಧರ ಪಾಟೀಲ್, ಅಕ್ಷಯ ಸೂರ್ಯವಂಶಿ, ವಿರುಪಾಕ್ಷ ಕಮ್ಮಾರ್ ಉಪಸ್ಥಿತರಿದ್ದರು.

ಸ್ಪರ್ಧೆಗಾಗಿ ಆಯ್ಕೆ ಮಾಡಿದ ಅತ್ಯುತ್ತಮ ರಸ್ತೆ ಹಾಗೂ ಕಲ್ಪಿಸಿದ ಸೌಲಭ್ಯಗಳ ಬಗ್ಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ರೆಫರಿಗಳು ತೃಪ್ತಿ ವ್ಯಕ್ತಪಡಿಸಿದರಲ್ಲದೆ, ಈರಣ್ಣ ಕಾಡಪ್ಪನವರ ತಂಡದ ಶ್ರಮವನ್ನು ಶ್ಲಾಘಿಸಿದರು.

ಆದರೆ ಮಹಾನಗರ ಪಾಲಿಕೆ ಕಳುಹಿಸಿದ್ದ ಮೊಬೈಲ್ ಟಾಯ್ಲೆಟ್ ವ್ಯಾನ್ ಕೆಟ್ಟು ನಿಂತಿದ್ದರಿಂದ ಮಕ್ಕಳು ಹಾಗೂ ಮಹಿಳೆಯರು ಪರದಾಡಬೇಕಾಯಿತು. ಹಾಗೇ ಚಿಟಗುಪ್ಪಿ ಆಸ್ಪತ್ರೆ ವೈದ್ಯಾಧಿಕಾರಿಗಳೂ ವೈದ್ಯಕೀಯ ಸೌಲಭ್ಯ ನೀಡಲು ಹಿಂದೇಟು ಹಾಕಿದ್ದು ಸಂಘಟಕರಿಗೆ ನೋವನ್ನುಂಟು ಮಾಡಿತು.

Edited By : Suman K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2024 05:24 pm

Cinque Terre

94.76 K

Cinque Terre

0

ಸಂಬಂಧಿತ ಸುದ್ದಿ