ಧಾರವಾಡ: ಧಾರವಾಡದ ಹೊಸಯಲ್ಲಾಪುರದ ಬಳಿ ನಿನ್ನೆ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಗಣೇಶೋತ್ಸವ ಕಮಿಟಿ ಸದಸ್ಯರು ಧಾರವಾಡದ ಶಹರ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ನಿನ್ನೆ ಗಣೇಶ ವಿಸರ್ಜನೆ ವೇಳೆ ಲಾಠಿ ಪ್ರಹಾರ ನಡೆಸಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾವು 20ಕ್ಕಿಂತ ಹೆಚ್ಚು ಜನ ಅಲ್ಲಿ ಸೇರಿರಲಿಲ್ಲ. ಆದರೂ ಪೊಲೀಸರು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಠಿ ಪ್ರಹಾರ ನಡೆಸಿದ್ದಾರೆ. ಅಲ್ಲದೇ ಐದು ಜನರನ್ನು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಐವರನ್ನು ಕೂಡಲೇ ಹೊರಗಡೆ ಬಿಡಬೇಕು. ಲಾಠಿ ಚಾರ್ಜ್ ಮಾಡಿದ ಎಸಿಪಿ ಅನುಶಾ ಅವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹೊಡೆಯಲು ನಿಮಗೆ ಅಧಿಕಾರ ಕೊಟ್ಟವರಾರು? ಜನಸಾಮಾನ್ಯರಿಗೂ ಒಂದೇ ಕಾನೂನು ಪೊಲೀಸರಿಗೂ ಒಂದೇ ಕಾನೂನು ಇದೆ. ನಾವು ಡಿಜೆ ಹಚ್ಚಿ ಕುಣಿಯುತ್ತಿರಲಿಲ್ಲ. ಸನ್ಮಾನ ಸಮಾರಂಭ ಮಾಡಿ ಶಾಂತ ರೀತಿಯಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದೆವು. ಆದರೂ ಕೆಲ ಪೊಲೀಸರು ಉದ್ದೇಶಪೂರ್ವಕವಾಗಿ ಈ ರೀತಿಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಎಸಿಪಿ ಅನುಶಾ ಅವರ ಮೇಲೆ ಕಾನೂನು ಕ್ರಮ ಕೈಕೊಂಡು ವಶಕ್ಕೆ ಪಡೆದಿರುವ ಕಾರ್ಯಕರ್ತರನ್ನು ಹೊರಗಡೆ ಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Kshetra Samachara
17/09/2021 12:51 pm