ಬೆಂಗಳೂರು : ಕರ್ನಾಟಕದ ಪೊಲೀಸ್ ಇಲಾಖೆಯಲ್ಲಿ ಕೆಲ ಖಡಕ್ ಪೊಲೀಸ್ ಅಧಿಕಾರಿಗಳ ಹೆಸರು ಎಷ್ಟೇ ವರ್ಷಗಳಾದರೂ ಮಾಸುವುದಿಲ್ಲ. ಈ ಸಾಲಿನಲ್ಲಿ ಬರುವ ಐಪಿಎಸ್ ಅಧಿಕಾರಿಯಾಗಿ ಹೆಸರುವಾಸಿಯಾಗಿದ್ದ ಅಂದಿನ ಬೆಂಗಳೂರಿನ ರೌಡಿಗಳ ಸಿಂಹಸ್ವಪ್ನ ಎಚ್.ಟಿ.ಸಾಂಗ್ಲಿಯಾನ ಅವರು ಒಂದು ಮೈಲಿಗಲ್ಲು. ಅವರ ಕಾರ್ಯವೈಖರಿಯಿಂದಲೇ ಕರ್ನಾಟಕ ಪೊಲೀಸ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದರು.
ಸಾಂಗ್ಲಿಯಾನ ಇಲಾಖೆಯಲ್ಲಿನ ದಕ್ಷತೆಯ ಪ್ರೇರಣೆ ಪಡೆದು ಕನ್ನಡದಲ್ಲಿ ನಟ ಶಂಕರ್‌ನಾಗ್ ಅಭಿನಯದ ಸಾಂಗ್ಲಿಯಾನ ಸಿನಿಮಾ ಸಖತ್ ಹಿಟ್ ಕಂಡಿತ್ತು. ಬಳಿಕ ಸಾಂಗ್ಲಿಯಾನ ಅವರು ನಿವೃತ್ತರಾಗಿದ್ದರು.
ಈಗ ಹೇಗಿದ್ದಾರೆ ಸಾಂಗ್ಲಿಯಾನ?
ಸಾಂಗ್ಲಿಯಾನ ಅವರು ನಿವೃತ್ತರಾದ ಬಳಿಕ ತಮ್ಮ ಕುಟುಂಬಸ್ಥರೊಂದಿಗೆ ನಿವೃತ್ತಿ ಜೀವನ ಸಾಗಿಸುತ್ತಿದ್ದು, ಇದೀಗ ವಿಡಿಯೋವೊಂದರ ಮೂಲಕ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಮನಾಲಿಯಲ್ಲಿ ಕುಟುಂಬಸ್ಥರೊಂದಿಗೆ ನೆಲೆಸಿರುವ ಅವರು ಊರುಗೋಲಿನ ನೆರವಿನಿಂದ ವಾಕಿಂಗ್ ಗೆ ತೆರಳುತ್ತಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ. ಸಾಂಗ್ಲಿಯಾನ ಅವರಿಗೆ ವಯಸ್ಸಾಗಿದ್ದು, ಕೈಯಲ್ಲಿ ಕೋಲು ಹಿಡಿದು ನಡೆದಾಡುತ್ತಿರುವ ವಿಡಿಯೋ ಅನ್ನು ಹಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಂದು ಕರ್ನಾಟಕದ ಟಾಪ್ ಪೊಲೀಸ್ ಆಫೀಸರ್ ಆಗಿದ್ದ ಸಾಂಗ್ಲಿಯಾನ ಸರ್.. ಇಂದು ಹೀಗಿದ್ದಾರೆ ಎಂದು ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿಗಳಾಗಿ ಹೆಸರು ಮಾಡಿದ ಸಾಂಗ್ಲಿಯಾನ ಅವರು ಮಿಜೋರಾಂನವರು. 1942ರ ಜೂನ್ 1ರಂದು ಜನಿಸಿದ ಸಾಂಗ್ಲಿಯಾನ ಅವರು ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) 1967ರ ಬ್ಯಾಚ್‌ನಿಂದ ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡು ಬಂದರು.
ಸಾಂಗ್ಲಿಯಾನ ಅವರು ಕಳ್ಳರಿಗೆ ಸಿಂಹಸ್ವಪ್ನವಾಗಿದ್ದರು. ಅಲ್ಲದೆ ಅವರು ಟ್ರಾಫಿಕ್ ವಿಭಾಗದ ಮುಖ್ಯಸ್ಥರಾದಾಗ ಅವರು ಮುಖ್ಯವಾಗಿ ಅಡ್ಡಾದಿಡ್ಡಿ ಪಾರ್ಕಿಂಗ್, ವಾಹನ ಚಾಲನೆ, ರಸ್ತೆ ದಾಟುವಾಗ ಜನರ ನಿರ್ಲಕ್ಷ್ಯ ಸೇರಿದಂತೆ ಕಾನೂನಿನ ಬಗ್ಗೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತಿದ್ದರು. ಮುಖ್ಯವಾಗಿ ಸಾಂಗ್ಲಿಯಾನ ಅವರು ಯಾವುದೇ ರಾಜಕೀಯ ಒತ್ತಡಗಳಿಗೆ ಬಗ್ಗುತ್ತಿರಲಿಲ್ಲ.
ವಿಶೇಷ ಪೊಲೀಸ್ ಕಮಿಷನರ್ ಆಗಿದ್ದಾಗ ಸಾಂಗ್ಲಿಯಾನ ಅವರು ಹಿರಿಯ ಅಧಿಕಾರಿಯ ಪತ್ನಿ ಮನೆಗೆ ತರಲು ಪೊಲೀಸ್ ವಾಹನ ಬಳಸಿದ್ದಕ್ಕೆ ಅವರ ವಿರುದ್ಧವೇ ಕೇಸ್ ದಾಖಲಿಸಿದ್ದರು. ಈ ಘಟನೆ ಕೂಡ ಸಾಂಗ್ಲಿಯಾನ ಚಿತ್ರದಲ್ಲಿದೆ. ಈಗಲೂ ಸಾಂಗ್ಲಿಯಾನರ ಕಾರ್ಯವೈಖರಿಯನ್ನು ಸ್ಥಳೀಯರು ನೆನೆಯುತ್ತಾರೆ.
PublicNext
18/01/2025 08:53 pm