ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಶಾಲಾ ದಿನಗಳನ್ನ ನೆನಪಿಸಿಕೊಂಡಿದ್ದಾರೆ. ಕನ್ನಡ ಮೀಡಿಯಂನಿಂದ ಇಂಗ್ಲೀಷ್ ಮೀಡಿಯಂಗೆ ಬಂದಾಗ ಆದ ಕಷ್ಟಗಳನ್ನು ನೆನಪಿಸಿಕೊಂಡಿದ್ದಾರೆ. ಹೌದು ರಜನಿಕಾಂತ್ ಸೂಪರ್ ಸ್ಟಾರ್ ಆಗಿದ್ದರೂ ಮೊದಲು ಅವರು ಕನ್ನಡದವರು. ರಜನಿಕಾಂತ್ ಬೆಂಗಳೂರಿನವರಾಗಿದ್ದರೂ ಅವರ ಸ್ಕೂಲ್ ಡೇಸ್ ಹೇಗಿದ್ದವು ಹಾಗೂ ಅವ್ರು ಕನ್ನಡ ಹೇಗೆ ಮಾತನಾಡುತ್ತಾರೆ ಎನ್ನುವ ಅಭಿಮಾನಿಗಳ ಆಸೆಯನ್ನು ತಲೈವಾ ಈಡೇರಿಸಿದ್ದಾರೆ.
ಸದ್ಯ ತಾವು ಕಲಿತ ಎಪಿಎಸ್ ಹೈಸ್ಕೂಲ್- ಕಾಲೇಜಿನ ಹಳೆಯ ವಿದ್ಯಾರ್ಥಿಗಳ ದಿನಾಚರಣೆಗೆ ಬ್ಯಾಂಕಾಕ್ನಿಂದಲೇ ತಲೈವಾ ಶುಭಾಶಯ ತಿಳಿಸಿದ್ದಾರೆ.
ರಜನಿಕಾಂತ್ ಅವರು ತಮ್ಮ ಶಾಲಾ ದಿನಗಳು ಕುರಿತು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿದ್ದಾರೆ.
ಬೆಂಗಳೂರಿನಲ್ಲಿ ತಮ್ಮ ಬಾಲ್ಯದ ಜೀವನ ಕಳೆದು ಸಿಲಿಕಾನ್ ಸಿಟಿಯಲ್ಲೇ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ತಮ್ಮ ಮುಂದಿನ ಬದುಕು ಆರಂಭಿಸಿದ್ದರು. ಇದರಿಂದ ಅವರ ಬಾಲ್ಯದ ನೆನಪುಗಳನ್ನು ಹಿರಿಯ ನಟ ಮೆಲುಕು ಹಾಕಿದ್ದಾರೆ. ಅಲ್ಲದೇ ರಜನಿಕಾಂತ್ ಮೊದಲು ಕನ್ನಡ ಮೀಡಿಯಂ ವಿದ್ಯಾರ್ಥಿ ಎನ್ನುವುದು ಹೆಮ್ಮೆಯ ಸಂಗತಿ.
ತಮ್ಮ ಶಾಲಾ ದಿನಗಳು ಕುರಿತು ರಜನಿಕಾಂತ್ ಅವರು ಮಾತನಾಡಿ, ಬೆಂಗಳೂರಿನಲ್ಲಿ ಎಪಿಎಸ್ ಸ್ಕೂಲ್-ಕಾಲೇಜಿನಲ್ಲಿ ಓದಿದಕ್ಕೆ ನನಗೆ ಈಗಲೂ ತುಂಬಾ ಹೆಮ್ಮೆ ಇದೆ. ಮೊದಲು ನಾನು ಗವಿಪುರದಲ್ಲಿರುವ ಗಂಗಧಾರೇಶ್ವರ ದೇವಾಲಯದ ಬಳಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೆ. ನಾನು ಕ್ಲಾಸ್ಗೆ ಫಸ್ಟ್, ಬೆಸ್ಟ್ ಸ್ಟುಡೆಂಟ್, ಕ್ಲಾಸ್ಗೆ ನಾನೇ ಮಾನಿಟರ್ ಆಗಿದ್ದೆ. ಮಿಡಲ್ ಸ್ಕೂಲ್ನಲ್ಲಿ 98 ಪರಿಷೆಂಟ್ ಸ್ಕೋರ್ ಮಾಡಿದ್ದೆ ಎಂದು ರಜನಿಕಾಂತ್ ಗರ್ವದಿಂದ ಹೇಳಿಕೊಂಡಿದ್ದಾರೆ.
ಸ್ಕೂಲ್ನಲ್ಲಿ ತುಂಬಾ ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡಿದ್ದಕ್ಕೆ ನಮ್ಮ ಅಣ್ಣ, ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಎಪಿಎಸ್ ಹೈಸ್ಕೂಲ್ಗೆ ಸೇರಿಸಿಬಿಟ್ಟರು. ಇದರಿಂದ ನಾನು ಫಂಕ್ ಆಗಿ ಹೋಗಿಬಿಟ್ಟೆ. ಮೊದಲ ಬೆಂಚ್ನಲ್ಲಿದ್ದ ಸ್ಟುಡೆಂಟ್ ಕೊನೆ ಬೆಂಚ್ಗೆ ಬಂದು ಬಿಟ್ಟೆ. ಇದರಿಂದ ಡಿಪ್ರೆಶನ್ಗೆ ಹೋದೆ. ಆದರೆ ಎಪಿಎಸ್ ಸ್ಕೂಲ್-ಕಾಲೇಜಿನಲ್ಲಿ ಶಿಕ್ಷಕರು ನನ್ನ ಮೇಲೆ ಸಾಕಷ್ಟು ಅಭಿಮಾನ ತೋರಿಸಿದರು. ಕರುಣೆ ತೋರಿಸಿ, ಪ್ರೇಮದಿಂದ ಪಾಠ ಹೇಳಿದರು. ಇದರಿಂದ ನಾನು 8, 9ನೇ ತರಗತಿಯನ್ನು ಪಾಸ್ ಮಾಡಿದೆ. ಆದರೆ 10ನೇ ತರಗತಿ (ಆವಾಗ ಪಬ್ಲಿಕ್ ಎಕ್ಸಾಂ) ಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.
10ನೇ ತರಗತಿಯಲ್ಲಿ ಪಿಸಿಎಂ ವಿಷಯ ತೆಗೆದುಕೊಂಡಿದ್ದರಿಂದ ಓದುವುದರಲ್ಲಿ ಬಹಳ ವೀಕ್ ಆಗಿದ್ದೆ. ಇದರಿಂದ ಈ ವಿಷಯಗಳಲ್ಲಿ ಫೇಲ್ ಆಗಿದ್ದೆ. ಆವಾಗ ನಮ್ಮ ಕೆಮಿಸ್ಟ್ರೀ ಟೀಚರ್, ಮನಗೆ ಬಂದು 6 ಗಂಟೆಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಉಚಿತವಾಗಿ, ಸ್ಪೆಷಲ್ ಇಂಟ್ರೆಸ್ಟ್ ತೆಗೆದುಕೊಂಡು ಕ್ಲಾಸ್ ಮಾಡುತ್ತಿದ್ದರು. ಹೀಗಾಗಿ 10ನೇ ಕ್ಲಾಸ್ ಪಾಸ್ ಮಾಡಿದೆ. ಇದಾದ ಮೇಲೆ ಅಲ್ಲೇ ಎಪಿಎಸ್ ಕಾಲೇಜಿಗೆ ಸೇರಿದೆ. ಆದರೆ ಆ ಮೇಲೆ ಕೆಲ ಕಾರಣಗಳಿಂದ ಕಾಲೇಜು ಕಂಟಿನ್ಯೂ ಮಾಡಲಾಗಲಿಲ್ಲ ಎಂದು ನೆನಪು ಮಾಡಿಕೊಂಡರು.
ಎಪಿಎಸ್ ಹೈಸ್ಕೂಲ್ನಲ್ಲಿ ಇಂಟರ್ ಹೈಸ್ಕೂಲ್ ಡ್ರಾಮಾಗಳು ನಡೆದವು. ಈ ಡ್ರಾಮಾ ಕಾರ್ಯಕ್ರದಮಲ್ಲಿ ನೀನು ಡ್ರಾಮಾ ಮಾಡಬೇಕು ಎಂದು ಟೀಚರ್ ಹೇಳಿದ್ದರು ಅಂತ ನಟನೆ ಮೊದಲು ಹೇಗೆ ಪ್ರಾರಂಭ ಆಯಿತು ಅಂತ ಹೇಳಿಕೊಂಡರು.
ಮನೆಯಿಂದ ಶಾಲೆಗೆ ಹೋಗಬೇಕಾದರೆ ದೊಡ್ಡಗಣೇಶ, ಬಸವನಗುಡಿ ಅಲ್ಲಿ ಓಡಾಡಿರುವುದೆಲ್ಲ ಈಗಲೂ ನನ್ನ ಮನಸಿಲ್ಲಿ ಹಚ್ಚ ಹಸಿರಾಗಿದೆ. ತುಂಬಾ ಹೆಮ್ಮೆ ಇದೆ. ಮುಂದಿನ ಬಾರಿ ಬಂದಾಗ ನಿಮ್ಮೆಲ್ಲರನ್ನೂ ಭೇಟಿ ಮಾಡುತ್ತೇನೆ ಎಂದು ಎಪಿಎಸ್ ಹೈಸ್ಕೂಲ್ ಸಿಬ್ಬಂದಿಗೆ ತಿಳಿಸಿದ್ದಾರೆ. ಅಲ್ಲದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕಾ, ಬೇಡ್ವಾ ಎಂದು ಕೇಳಿದ್ದಕ್ಕೆ, ಧಾರಾಳವಾಗಿ ಪೋಸ್ಟ್ ಶೇರ್ ಮಾಡಿ ಎಂದು ಸೂಪರ್ ಸ್ಟಾರ್ ಹೇಳಿದ್ದಾರೆ.
PublicNext
18/01/2025 08:02 pm