ನವಲಗುಂದ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಇ.ಡಿ. ವಿಚಾರಣೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಇಂದು ನವಲಗುಂದ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮೂಲಕ ಆಕ್ರೋಶ ಹೊರ ಹಾಕಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿ, ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಭವನದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಸದರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಈಗಾಗಲೇ ವಿಚಾರಣೆ ಮುಗಿದಿದ್ದರೂ ಮತ್ತೆ ವಿಚಾರಣೆಗೆ ನೋಟಿಸ್ ನೀಡಿದೆ ಎಂದು ಕಿಡಿ ಕಾರಿದರು.
ಇದೇ ಪ್ರತಿಭಟನೆಯಲ್ಲಿ ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಲಾಯಿತು. ಕೆಲ ಸಂಬಂಧಿಸಿದ ಇಲಾಖೆಯಿಂದ ಕೇಂದ್ರ ಸರ್ಕಾರ ಅನುಮತಿ ಪಡೆದು ರಾಜ್ಯ ಸರ್ಕಾರ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಬೇಕಿದೆ. ಕೂಡಲೇ ಸರ್ಕಾರ ಈ ಯೋಜನೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ದಿನಸಿ ಸಹಿತ ಇತರ ಪದಾರ್ಥಗಳ ಮೇಲೆ ಭಾರಿ ಜಿಎಸ್‍ಟಿ ತೆರಿಗೆ ಹಾಕಿದ್ದು, ಸಾರ್ವಜನಿಕರು ಕಂಗೆಡುವಂತಾಗಿದೆ. ಅತಿವೃಷ್ಟಿ ಹಾಗೂ ಬರಗಾಲಕ್ಕೆ ಪರಿಹಾರ ನೀಡಲು ಹಳೆ ಪದ್ಧತಿಯ ಎನ್.ಡಿ.ಆರ್.ಎಫ್. ನಿಯಮ ಬದಲಾವಣೆ ಮಾಡಿ ಹೆಚ್ಚಿನ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕು.
ಈ ಸಂದರ್ಭ ಮಾಜಿ ಸಚಿವರಾದ ಕೆ.ಎನ್. ಗಡ್ಡಿ, ಧಾರವಾಡ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
25/07/2022 09:04 pm