ಧಾರವಾಡ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆ ಮೂರು ದಿನಗಳ ಕಾಲ ರಾಜ್ಯದಲ್ಲಿ ರಾಜ್ಯ ಸರ್ಕಾರ ಶೋಕಾಚರಣೆ ಘೋಷಣೆ ಮಾಡಿದೆ. ಶೋಕಾಚರಣೆ ಇದ್ದ ಸಂದರ್ಭದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮನರಂಜನಾ ಕಾರ್ಯಕ್ರಮ ನಡೆಸುವಂತಿಲ್ಲ. ಆದರೆ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಭವನದಲ್ಲಿ ಶೋಕಾಚರಣೆ ಮಧ್ಯೆಯೂ ಅದ್ಧೂರಿ ಯುವ ಜನೋತ್ಸವ ನಡೆದಿದೆ.
ನಿನ್ನೆ ಈ ಯುವ ಜನೋತ್ಸವಕ್ಕೆ ಚಾಲನೆ ನೀಡಲಾಗಿದೆ. ಇಂದು ಶೋಕಾಚರಣೆ ಇದ್ದರೂ ಕವಿವಿಯಲ್ಲಿ ಅಂತರ ವಲಯ ಯುವ ಜನೋತ್ಸವ ಅದ್ಧೂರಿಯಾಗಿಯೇ ನಡೆದಿದೆ. ಈ ಯುವ ಜನೋತ್ಸವದಲ್ಲಿ ಜಾನಪದ ನೃತ್ಯ, ಡೊಳ್ಳು ಕುಣಿತ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ.
ರಾಜ್ಯದ ಒಬ್ಬ ಮಾಜಿ ಮುಖ್ಯಮಂತ್ರಿ ನಿಧನರಾದಾಗ ಅದರಲ್ಲೂ ಶೋಕಾಚರಣೆ ಇದ್ದ ಸಂದರ್ಭದಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಾರದು ಎಂಬ ಸಾಮಾನ್ಯ ಜ್ಞಾನ ಕೂಡ ಕವಿವಿಗೆ ಇಲ್ಲದಾಯಿತೇ ಎಂಬ ಪ್ರಶ್ನೆ ಇದೀಗ ಮೂಡಿದೆ. ಅಲ್ಲದೇ ಕವಿವಿಯ ಈ ನಡೆಗೆ ಆಕ್ರೋಶ ಕೂಡ ವ್ಯಕ್ತವಾಗಿದೆ.
Kshetra Samachara
11/12/2024 09:23 pm