ಧಾರವಾಡ: ಎಲ್ಲಿ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಶಾಲೆಗೆ ಹೋಗುತ್ತಾರೋ ಹಾಗೂ ಪ್ರವಾಹ ಎದುರಾಗುವ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ಜಿಲ್ಲೆಯಾದ್ಯಂತ ಎರಡ್ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಇದರಿಂದ ಹಳ್ಳ, ಕೊಳ್ಳಗಳು ತುಂಬಿ ಬರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲೆಲ್ಲಿ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಶಾಲೆಗೆ ಹೋಗಬೇಕೋ ಅಂತಹ ಪ್ರದೇಶದಲ್ಲಿನ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಈ ಸಂಬಂಧ ಡಿಡಿಪಿಐ ಅವರ ಜೊತೆಗೆ ಮಾತನಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಾಡಿಕೆಯಂತೆ 26.3 ಎಂ.ಎಂ. ಮಳೆಯಾಗಬೇಕಿತ್ತು. ಆದರೆ, ನವೆಂಬರ್‌ವರೆಗೆ 70.1 ಎಂಎಂ ಮಳೆಯಾಗಿದೆ. ಅಳ್ನಾವರ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಶೇ.167 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದರು.
188 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 22 ಮನೆಗಳು ಸಂಪೂರ್ಣ ಹಾಳಾಗಿವೆ. 7390 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಗೀಡಾಗಿದೆ. 1210 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. ಇನ್ನೂ ಮಳೆ ಇರುವುದರಿಂದ ಬೆಳೆ ಹಾನಿ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.
28 ಕಿಮೀ ರಸ್ತೆ ಹಾಳಾಗಿದೆ. ಅಧಿಕಾರಿಗಳು ಜಿಲ್ಲಾ ಕೇಂದ್ರ ಬಿಟ್ಟು ಹೋಗದಂತೆ ಸೂಚನೆ ನೀಡಲಾಗಿದೆ. ಎನ್‌ಡಿಆರ್‌ಎಫ್ ಸರ್ವೆ ಪ್ರಕಾರ ಜಿಲ್ಲೆಯಲ್ಲಿ 4 ಕೋಟಿಯಷ್ಟು ಹಾನಿಯಾಗಿದೆ. ಭತ್ತ, ಹತ್ತಿ, ಕಡಲೆ, ಮೆಣಸಿನಕಾಯಿ, ಟೊಮೆಟೊ ಹಾಗೂ, ಬೀನ್ಸ್ ಹಾಳಾಗಿವೆ. ಹೊಲ್ತಿಕೋಟೆ ಕೆರೆ ಒಡೆದಿದ್ದು, ಸಣ್ಣ ನೀರಾವರಿ ಇಲಾಖೆಯಿಂದ ತುರ್ತು ಕಾಮಗಾರಿಗಾಗಿ ಈಗಾಗಲೇ 15 ಲಕ್ಷ ಪರಿಹಾರ ಬಿಡುಗಡೆ ಮಾಡಲಾಗಿದೆ. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಮಳೆಯಿಂದ ಹಾನಿಗೀಡಾದ ಬೆಳೆಗೆ ಪರಿಹಾರ ನೀಡಲಾಗಿದೆ. ಅಂದು ನಾಲ್ಕು ಜನ ಪ್ರಾಣ ಕಳೆದುಕೊಂಡಿದ್ದರು. ಅವರಿಗೆ ತಲಾ 5 ಲಕ್ಷ ಪರಿಹಾರ ನೀಡಲಾಗಿದೆ ಎಂದರು.
Kshetra Samachara
19/11/2021 03:16 pm