ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಗಾರ್ಡ್ ಕೈಕಾಲು ಕಟ್ಟಿ ಉದ್ಯಮಿ ಮನೆ ದೋಚಿದ ದರೋಡೆಕೋರರು- ಪೊಲೀಸ್ ತನಿಖೆ ಚುರುಕು

ಹುಬ್ಬಳ್ಳಿ: ಈವರೆಗೂ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಕಳ್ಳರ ಗ್ಯಾಂಗ್ ಮತ್ತೆ ಸದ್ದು ಮಾಡಿದ್ದು, ನಗರದ ಜನತೆ ಆತಂಕಗೊಂಡಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಒಬ್ಬರ ಕೈಕಾಲು ಕಟ್ಟಿಹಾಕಿ ಮನೆಯನ್ನು ದರೋಡೆ ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಾಲ್ಕೈದು ಜನರ ಗುಂಪೊಂದು ಎಂಟ್ರಿ ಕೊಟ್ಟು ಮನೆಯ ಮುಂದೆ ಇದ್ದ ಭದ್ರತಾ ಸಿಬ್ಬಂದಿಯ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಇನ್ನು ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಕಳ್ಳತನ ನಡೆದ ಕುರಿತಂತೆ ಮನೆಯವರಿಂದ ಮಾಹಿತಿಯನ್ನು ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ ...

ಶಾಂತವಾಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ದರೋಡೆಕೋರರು ಸದ್ದು ಮಾಡಿದ್ದಾರೆ. ನಗರಕ್ಕೆ ಪೊಲೀಸ್ ಆಯುಕ್ತರಾಗಿ ಶಶಿಕುಮಾರ್ ಬಂದ ಮೇಲೆ ನಗರದಲ್ಲಿ ಒಂದಿಷ್ಟು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ರು. ಹೀಗಾಗಿ ನಗರದಲ್ಲಿ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಬೆನ್ನಲ್ಲೇ ನಗರದಲ್ಲಿ ಮತ್ತೆ ದೊಡ್ಡ ಪ್ರಮಾಣದಲ್ಲಿ ದರೋಡೆಯೊಂದು ನಡೆದಿದೆ. ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಸಚಿನ್ ಸುತಾರಿಯಾ ಎಂಬುವವರ ಮನೆಗೆ ಬೆಳಗಿನ ಜಾವ ಎಂಟ್ರಿ ಕೊಟ್ಟ ದರೋಡೆಕೋರರ ಗ್ಯಾಂಗ್ ಮನೆಗೆ ಕನ್ನ ಹಾಕಿದ್ದಾರೆ.

ಮನೆಯ ಹಿಂದಿನ ಬಾಗಿಲಿನಿಂದ ಬಂದ ನಾಲ್ಕೈದು ಜನರ ಗ್ಯಾಂಗ್ ಮನೆಯ ಮುಂದೆ ಇದ್ದ ಸೆಕ್ಯೂರಿಟಿ ಗಾರ್ಡ್ ನ ಕೈಕಾಲು ಕಟ್ಟಿಹಾಕಿ ರೇಲ್ವೆ ಗೇಟ್ ಬಳಿ ಹಾಕಿದ್ದಾರೆ. ನಂತರ ಮನೆಯ ಬಾಗಿಲು ಮುರಿದು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಉದ್ಯಮಿ ಸಚಿನ್ ಸುತಾರಿಯಾ ಮೊದಲನೆಯ ಫ್ಲೋರ್ ನಲ್ಲಿ ಮಲಗಿಕೊಂಡಿದ್ದರೆ, ಕೆಳಗಡೆ ಅವರ ತಂದೆ ತಾಯಿ ಮಲಗಿಕೊಂಡಿದ್ದರು. ವಯಸ್ಸಾದ ಇವರನ್ನು ಹೆದರಿಸಿ ನಂತರ ಕೈಗೆ ಸಿಕ್ಕಷ್ಟು ಬಂಗಾರ ಸೇರಿದಂತೆ ಎಲ್ಲವನ್ನೂ ದರೋಡೆ ಮಾಡಿಕೊಂಡು ಹೋಗಿದ್ದಾರೆ.

ಇನ್ನು ಬೆಳಗಿನ‌ ಜಾವ ಅಶೋಕನಗರ ಪೊಲೀಸ್ ಠಾಣೆ ಹತ್ತಿರದಲ್ಲಿರುವ ಬಡಾವಣೆಯಲ್ಲಿಯೇ ಈ ಒಂದು ಘಟನೆ ನಡೆದಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪೊಲೀಸ್ ಆಯುಕ್ತ ಶಶಿಕುಮಾರ್, ಡಿಸಿಪಿ ಸಹಿತ ಇತರ ಅಧಿಕಾರಿಗಳು ಶ್ವಾನ ದಳದೊಂದಿಗೆ ಆಗಮಿಸಿ ಪರಿಶೀಲನೆ ಮಾಡಿದರು. ದರೋಡೆ ಮಾಡಿರುವ ಕುರಿತಂತೆ ಮನೆಯನ್ನು ವೀಕ್ಷಣೆ ಮಾಡಿ ಕುಟುಂಬದವರಿಂದ ಮಾಹಿತಿಯನ್ನು ಪಡೆದುಕೊಂಡರು.

ಸದ್ಯ 1 ಚೈನ್ ಮತ್ತು 2 ಬಳೆಗಳನ್ನು ಮಾತ್ರ ದರೋಡೆ ಮಾಡಿದ್ದು, 60 ರಿಂದ 70 ಗ್ರಾಂ ಬಂಗಾರವನ್ನು ದರೋಡೆ ಮಾಡಿರುವ ಕುರಿತಂತೆ ಕುಟುಂಬದವರು ಪೊಲೀಸರಿಗೆ ದೂರಿನಲ್ಲಿ ಉಲ್ಲೇಖ ಮಾಡಿ ದೂರನ್ನು ನೀಡಿದ್ದಾರೆ. ಇನ್ನು ಈ ಕುರಿತಂತೆ ಸಿಸಿ ಟಿ‌ವಿ ಆಧರಿಸಿ ಕಳ್ಳತನಕ್ಕೆ ಮುಂದಾದ ಗ್ಯಾಂಗ್ ನ ತನಿಖೆಗೆ ಮುಂದಾಗಿದ್ದು, ಶೀಘ್ರವೇ ಗ್ಯಾಂಗ್ ನ‌ ಮಾಹಿತಿ ಕಲೆಹಾಕುವುದಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಶಾಂತವಾಗಿದ್ದ ನಗರದಲ್ಲಿ ಮತ್ತೆ ಈ ಒಂದು ದರೋಡೆ ಪ್ರಕರಣ ನಗರದ ಜನತೆಯನ್ನು ಬೆಚ್ಚಿಬೀಳಿಸಿದ್ದು, ಅದರಲ್ಲೂ ಸೆಕ್ಯುರಿಟಿಯನ್ನು ಕೈಕಾಲು ಕಟ್ಟಿ ಮನೆಯವರನ್ನೂ ಸಹ ರೂಮಿನಲ್ಲಿ ಕೂಡಿ ಹಾಕಿ ದರೋಡೆ ಮಾಡಿರುವ ಪ್ರಕರಣ ಮತ್ತಷ್ಟು ಆತಂಕ‌ ಮೂಡಿಸಿದೆ. ಈ ಕುರಿತಂತೆ ಪೊಲೀಸರು ತನಿಖೆಗಾಗಿ ಐದಾರು ತಂಡಗಳನ್ನು ರಚನೆ ಮಾಡಿದ್ದು, ಅವಳಿನಗರದ ಜನತೆ ಯಾವುದೇ ರೀತಿಯಲ್ಲಿ ಭಯಪಡದಂತೆ ಸಾರ್ವಜನಿಕರಿಗೆ ಸಂದೇಶವನ್ನು ನೀಡಿದ್ದಾರೆ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/12/2024 11:00 pm

Cinque Terre

18.64 K

Cinque Terre

1

ಸಂಬಂಧಿತ ಸುದ್ದಿ