ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ್ದ ಗ್ರೂಪ್ ಎ, ಗ್ರೂಪ್ ಸಿ ಹಾಗೂ 384 ವೃಂದ ನೇಮಕಾತಿಯ ಮರು ಪರೀಕ್ಷೆಗೆ ಇದ್ದ ತಡೆಯಾಜ್ಞೆಯನ್ನು ಧಾರವಾಡ ಹೈಕೋರ್ಟ್ ತೆರವುಗೊಳಿಸಿದೆ. ಆ ಮೂಲಕ ಕೆಪಿಎಸ್‌ಸಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
ಕೆಪಿಎಸ್‌ಸಿಯು ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯನ್ನು ಇತ್ತೀಚೆಗೆ ನಡೆಸಿತ್ತು. ಆದರೆ, ಈ ಪರೀಕ್ಷೆಯಲ್ಲಿ ಇಂಗ್ಲೀಷ್‌ನಿಂದ ಕನ್ನಡಕ್ಕೆ ಆಗಬೇಕಿದ್ದ ಭಾಷಾಂತರದಲ್ಲಿ ಯಡವಟ್ಟು ಆಗಿದ್ದು, ಮರು ಪರೀಕ್ಷೆ ನಡೆಸಬೇಕು ಎಂದು ಕೆಲ ಅಭ್ಯರ್ಥಿಗಳು ಒತ್ತಾಯ ಮಾಡಿದ್ದರು. ಅಭ್ಯರ್ಥಿಗಳ ಒತ್ತಾಯಕ್ಕೆ ಮಣಿದು ಕೆಪಿಎಸ್‌ಸಿ ಇದೇ ಡಿ.29 ರಂದು ಮರು ಪರೀಕ್ಷೆ ಮಾಡಲು ಆದೇಶಿಸಿತ್ತು.
ಆದರೆ, ಮರು ಪರೀಕ್ಷೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಬೆಳಗಾವಿಯ ಸ್ಪೂರ್ತಿ ಭೈರಪ್ಪನವರ ಸೇರಿದಂತೆ ಅನೇಕರು ಧಾರವಾಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಕೆಪಿಎಸ್‌ಸಿ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಕೆಪಿಎಸ್‌ಸಿಯು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಕುರಿತು ಪರೀಕ್ಷೆ ನಡೆಸಿತ್ತು. ಇಂದು ಹೈಕೋರ್ಟ್‌ನಲ್ಲಿ ಈ ಕುರಿತು ಮತ್ತೆ ಇಂದು ಅರ್ಜಿ ವಿಚಾರಣೆ ನಡೆಯಿತು. ವಿಚಾರಣೆ ನಂತರ ಕೆಪಿಎಸ್‌ಸಿ ನಡೆಸಬೇಕಿದ್ದ ಪರೀಕ್ಷೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ ಆದೇಶಿಸಿದೆ. ಇದರಿಂದ ಡಿ.29 ರಂದು ನಡೆಯಬೇಕಿರುವ ಮರು ಪರೀಕ್ಷೆಯ ದಾರಿ ಸುಗಮವಾದಂತಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/12/2024 07:05 pm