ಹುಬ್ಬಳ್ಳಿ : ನಮ್ಮ ಹುಬ್ಬಳ್ಳಿನ ಸ್ಮಾರ್ಟ್ ಮಾಡೋಕೆ ಈ ಯೋಜನೆಗಳು ಬರ್ತಾವೋ.. ಏನು ಹಾಳು ಮಾಡೋಕೆ ಈ ಯೋಜನೆ ಬರ್ತಾವೋ ಒಂದು ತಿಳಿಯದಂಗ ಆಗೈತಿ ನೋಡ್ರಿ.
ರಸ್ತೆ ಮಾಡ್ತಿವಿ... ರಸ್ತೆ ಮಾಡ್ತಿವಿ ಅಂತ ಬಂದವರು ರಸ್ತೆ ಮಾಡಿ ಅದರಾಗ ರಾಡಿ ಎಬ್ಬಿಸಿ ಹಾಳ ಮಾಡಿ ಹೋಗ್ಯಾರ ನೋಡ್ರಿ. ಅರೇ ಯಾಕ ಇಷ್ಟು ಬೈಯಾಕ್ ಹತ್ತಿರಿ ಅಂತೀರಿ ಅಲ್ಲ ಹಂಗಿದ್ದರೇ ಬರ್ರಿ ಹುಬ್ಬಳ್ಳ್ಯಾಗ ಮಾಡಿರೋ ಒಂದು ಘನ ಕಾರ್ಯ ತೋರಸ್ತೀವಿ ಆಮೇಲೆ ನೀವೆ ನಿರ್ಧಾರ ಮಾಡ್ರಿ ಬಯೋದೋ ಬ್ಯಾಡೋ ಅಂತ..
ನೋಡ್ರಿ... ನೋಡ್ರಿ ಎರಡು ಕಣ್ಣು ಬಿಟ್ಟು ಸರಿಯಾಗಿ ನೋಡ್ರಿ.. ರಸ್ತೆ ನಿರ್ಮಾಣದ ಗುತ್ತಿಗೆದಾರರಿಂದ ಮಹಾ ಯಡವಟ್ಟು ಆಗೈತಿ. ಇವರು ರೋಡ್ ಮಾಡ್ತಿವಿ ರೋಡ್.. ಅಂತ ಬಂದು ದೊಡ್ಡ ಯಡವಟ್ಟು ಮಾಡ್ಯಾರ.
ಹುಬ್ಬಳ್ಳಿಯ ಹೇಮಂತ ನಗರದಾಗ ರಸ್ತೆ ನಿರ್ಮಾಣ ಮಾಡುವಾಗ ಯಡವಟ್ಟು ಮಾಡಿದ ಗುತ್ತಿಗೆದಾರರು ಬೋರ್ ವೆಲ್ ಇದ್ದರೂ ಅರ್ಧ ಭಾಗ ಮುಚ್ಚಿ ರಸ್ತೆ ನಿರ್ಮಾಣ ಮಾಡಿ ಜಲ ಮೂಲಕ್ಕೆ ಕಂಠಕ ತಂದಿಟ್ಟಾರ ನೋಡ್ರಿ. ಅಮೃತ ಯೋಜನ್ಯಾಗ ರಸ್ತೆ ಮಾಡ್ತಿವಿ ಅಂತ ಹೇಳಿ ಅಮೃತದಂತ ನೀರು ಕೊಡುವ ಬೋರ್ ಅರ್ಧ ಮುಚ್ಚಿ ಉಪಯೋಗಕ್ಕೆ ಬರದಂಗ ಮಾಡ್ಯಾರ.
ಇನ್ನ ಪುಟ್ ಪಾತ್ ಗೆ ಫೀವರ್ಸ್ ಹಾಕುವಾಗ ಕಣ್ಣು ಮುಚ್ಚಿದ್ರೋ ಅಥವಾ ಕರೆಂಟ್ ಹೋದ ಟೈಮನ್ಯಾಗ ಕೆಲಸ ಮಾಡ್ಯಾರೋ ಒಂದು ಅರ್ಥ ಆಗವಲ್ದು. ಬೋರ್ ವೆಲ್ ಗಮನಿಸದ ಗುತ್ತಿಗೆದಾರ ತನಗೆ ಹೆಂಗ್ ಬೇಕ ಹಂಗ ಹಾಕಿ ಕೈ ತೊಳದಕೊಂಡ ಹೋಗ್ಯಾನ.
ಬೋರ್ ವೆಲ್ ಕೆಳಗೆ ಬಿಂದಿಗೆ ಇಡಾಕ ಜಾಗಿದಂಗ ರಸ್ತೆ ನಿರ್ಮಾಣ ಮಾಡ್ಯಾರ ಇದರಿಂದ ಯಾರಿಗೂ ಉಪಯೋಗ ಇಲ್ಲದಂಗ ಆಗೈತಿ ನೋಡ್ರಿ. ಹುಬ್ಬಳ್ಳಿ ಹೇಮಂತ್ ನಗರದ ಪಾರ್ಕ್ ಬಳಿ ಇರುವ ಹಳೆಯ ಬೋರ್ ವೆಲ್ ಗೆ ಮಾಡಿರುವುದನ್ನು ನೋಡಿದರೇ ಕಳ್ಳು ಚುರುಕ್ ಅಂತೈತಿ ನೋಡ್ರಿ.
ಒಟ್ಟಿನ್ಯಾಗ ಪುಟ್ ಪಾತ್ ಮಾಡಿದ್ದರಿಂದ ಬೋರ್ ವೆಲ್ ಮುಚ್ಚುವ ಭೀತಿ ಜನರ ಮನಸಿನ್ಯಾಗ ಹೊಕ್ಕಬಿಟ್ಟೈತಿ. ಸುಮಾರು ವರ್ಷದಿಂದ ಜನರಿಗೆ ನೀರಿನ ಮೂಲವಾಗಿದ್ದ ಬೋರ್ ವೆಲ್ ಜನಪ್ರತಿನಿಧಿಗಳ ಹಾಗೂ ಗುತ್ತಿಗೆದಾರರ ಕೈಯಾಗ ಸಿಕ್ಕ ಹಾಳಾಗಿ ಹೋಗೆತಿ ನೋಡ್ರಿ.
Kshetra Samachara
16/06/2022 08:46 pm