ಕುಂದಗೋಳ : ಜಮಖಂಡಿ ಸಂಸ್ಥಾನದಲ್ಲಿ ನಿರ್ಮಾಣವಾಗಿ ಒಂದು ಕಾಲದಲ್ಲಿ ಕುಂದಗೋಳ ಪಟ್ಟಣಕ್ಕೆ ದಾಹ ನೀಗಿಸುತ್ತಿದ್ದ ಪುರಾತನ ಅಗಸಿಹೊಂಡ ಇದೀಗ ಕಲುಷಿತ ನೀರಾಗಿ, ಕೆರೆ ಸುತ್ತ ಕಸ ಬೆಳೆದು ಅನೈರ್ಮಲ್ಯ ತಾಳಿ ಸ್ಥಳೀಯರಿಗೆ ಬೇಸರ ತಂದಿದೆ.
ಹೌದು ! ಕುಂದಗೋಳ ಪಟ್ಟಣದ ವಾರ್ಡ್ ನಂಬರ್ 18 ರಲ್ಲಿ ಬರುವ ರೌದ್ರ ರಮಣೀಯ ನೋಟದಂತೆ ಕಾಣುವ ಅಗಸಿಹೊಂಡ ಪ್ರಸ್ತುತ ಅನೈರ್ಮಲ್ಯ, ಕಸದ ತಾಣವಾಗಿ ಕಸ, ಕಡ್ಡಿ ತುಂಬಿ ಹಾವು, ಚೇಳುಗಳ ಬಿಡಾರವಾಗಿದೆ.
ಅತಿವೃಷ್ಟಿ ಪರಿಣಾಮ ಈ ವರ್ಷ ಭರ್ತಿ ತುಂಬಿದ ಕೆರೆಯಲ್ಲಿ ತೆಪ್ಪದ ರಥೋತ್ಸವ ನಡೆದರೂ, ಕೆರೆ ಸ್ವಚ್ಛತೆ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾತ್ರ ಮೌನ ತಾಳಿದ್ದಾರೆ. ಈಗಾಗಲೇ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ, ಮದ್ಯ ಸೇವಿಸಲು ಹೋಗಿ, ಈಜಾಟ ಮಾಡಲು ಹೋಗಿ ಅದೆಷ್ಟೋ ಜನ ಪ್ರಾಣ ಬಿಟ್ಟರೂ ಕೆರೆ ರಕ್ಷಣೆ ಮತ್ತು ಕೆರೆ ಕಾಯಲು ಕಾವಲುಗಾರನನ್ನು ನಿಯೋಜನೆ ಮಾಡಿಲ್ಲ.
ಮುಖ್ಯವಾಗಿ ಕೆರೆಯಂಗಳದಿಂದ ಸಂಪರ್ಕ ಪಡೆಯುವ ಅಗಸಿಹೊಂಡದ ಸುತ್ತ ಮುತ್ತಲಿನ ಸ್ಥಳೀಯ ನಿವಾಸಿಗಳಿಗೆ ಸೊಳ್ಳೆಗಳ ಕಾಟ ದುರ್ವಾಸನೆಯಿಂದ ರೋಗದ ಭಯ ಹೆಚ್ಚಾಗಿದೆ.
ಈ ಕಾರಣ ಪಟ್ಟಣ ಪಂಚಾಯಿತಿ ಅಗಸಿಹೊಂಡದ ಕೆರೆ ಸ್ವಚ್ಛತೆ, ಕಾವಲುಗಾರನ ನಿಯೋಜನೆ ಮತ್ತು ರಾತ್ರಿ ವಿದ್ಯುತ್ ದೀಪ ಅಳವಡಿಸಲು ಸ್ಥಳೀಯ ಜನರು ಒತ್ತಾಯ ಮಾಡಿದ್ದಾರೆ.
ಪಬ್ಲಿಕ್ ನೆಕ್ಸ್ಟ್, ನಮ್ಮೂರು ನಮ್ಮ ಕೆರೆ ವಿಶೇಷ : ಶ್ರೀಧರ್ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/12/2024 09:46 pm