ಧಾರವಾಡ: ಹಾ.. ನಮಸ್ಕಾರ್ರಿ. ಧಾರವಾಡ ಮಂದಿಗೆ.. ನಿಮ್ಮ ಪಬ್ಲಿಕ್ ನೆಕ್ಸ್ಟ್ ಆರಂಭ ಮಾಡಿರೋ ನಮ್ಮ ಊರು ನಮ್ಮ ಕೆರೆ ಅಭಿಯಾನದೊಳಗ ಇವತ್ತ ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಕೆರಿ ಸುದ್ದಿ ತುಗೊಂಡ ಬಂದೇವಿ ನೋಡ್ರಿ.
ಈಗ ಏನ್ ನೀವು ನೋಡಾಕತ್ತೀರಲ್ಲ ಇದು ಉಪ್ಪಿನ ಬೆಟಗೇರಿ ಗ್ರಾಮದೊಳಗ ನಿರ್ಮಾಣ ಮಾಡಿರೋ ಕೆರೆ. ಸುಮಾರು ಒಂದ 12 ಎಕರೆ ವಿಸ್ತೀರ್ಣ ಐತಿ ನೋಡ್ರಿ. 2006ರ ಅವಧಿಯೊಳಗ ವಿನಯ್ ಕುಲಕರ್ಣಿ ಅವ್ರು ಶಾಸಕರಿದ್ರು. ಅವಾಗ ಈ ಕೆರಿ ಮಂಜೂರಾಗಿತ್ತು. ಮುಂದ ಸೀಮಾ ಮಸೂತಿ ಅವರು ಶಾಸಕರಾದ ಮ್ಯಾಲ ಈ ಕೆರಿ ನಿರ್ಮಾಣ ಕಾಮಗಾರಿ ಆರಂಭ ಆತು. ಈ ಕೆರಿ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಬಂದಿತ್ತು. ಅಂದುಕೊಂಡಂಗ ಕೆರಿ ನಿರ್ಮಾಣ ಕೆಲಸಾನೂ ಆತ್ರಿ. ಉಪ್ಪಿನ ಬೆಟಗೇರಿ ಗ್ರಾಮಕ್ಕ ಕುಡಿಯುವ ನೀರಿನ ಸಮಸ್ಯೆ ತಪ್ಪಿಸೋ ಸಲುವಾಗಿ ಈ ಕೆರಿ ನಿರ್ಮಾಣ ಮಾಡಿದ್ರ. ಕೆಲವೊಂದಿಷ್ಟು ಹಳ್ಳದಿಂದ ಈ ಕೆರಿಗೆ ನೀರು ತುಂಬಿಸಿ ಆ ನೀರನ್ನ ಫಿಲ್ಟರ್ ಮಾಡಿ ಗ್ರಾಮಕ್ಕ ಕುಡಿಯುವ ನೀರು ಸರಬರಾಜು ಮಾಡು ಉದ್ದೇಶ ಇದಾಗಿತ್ತು. ಆದ್ರ. ಈಗಿನ ಈ ಕೆರಿ ಪರಿಸ್ಥಿತಿ ನೋಡಿದ್ರ ಕೋಟಿ ಕೋಟಿ ಅನುದಾನ ಹೊಳ್ಯಾಗ ಹುಣಸಿ ಹಣ್ಣ ತೊಳದಂಗ ಆಗೇತಿ ನೋಡ್ರಿ.
ಜಿಲ್ಲಾ ಪಂಚಾಯ್ತಿಯ ಜಲ ನಿರ್ಮಲ ಯೋಜನೆಗೊಳಗ ಈ ಕೆರಿ ನಿರ್ಮಾಣ ಮಾಡಲಾಗಿತ್ತು. ಆದ್ರ, ಈ ಕೆರಿಯೊಳಗ ಅದ್ಯಾಕೋ ಏನೋ ನೀರು ನಿಲ್ಲಲೇ ಇಲ್ಲ. ತಳಭಾಗದೊಳಗ ಉಸುಕು ಹತ್ತಿದ್ರಿಂದ ನೀರು ನಿಲ್ಲಲೇ ಇಲ್ಲ. ಈ ಕೆರಿಗೆ ಸಾಕಷ್ಟು ಖರ್ಚು ಮಾಡಿದ್ರೂ ಕೆರಿಯೊಳಗ ನೀರು ನಿಲ್ಲದೇ ಹೋಗಿದ್ರಿಂದ ಈ ಯೋಜನೆ ಅಷ್ಟಕ್ಕ ನಿಂತು ಹೋತು. ಅಷ್ಟರೊಳಗ ಉಪ್ಪಿನ ಬೆಟಗೇರಿ ಗ್ರಾಮಕ್ಕ ಮಲಪ್ರಭಾ ನೀರು ಪೂರೈಕೆ ಆರಂಭ ಆದಾಗಿನಿಂದ ಈ ಕೆರಿ ಮ್ಯಾಲಿನ ಮನಸ್ಸು ಜನಾ ತಗದ ಹಾಕಿದ್ರ ನೋಡ್ರಿ. ಆದ್ರ ಈ ಕೆರಿ ಹೆಸರಿನ ಮ್ಯಾಲ ಇಂದಿಗೂ ಸಾಕಷ್ಟು ಬಿಲ್ ತಗೀತಾರ. ಈ ಕೆರಿ ಒಂತರಾ ಬಿಲ್ ತಗ್ಯಾವ್ರಿಗೆ ಹುಲ್ಲುಗಾವಲು ಆದಂಗ ಆಗೇತಿ.
ಸುಮಾರು 12 ಎಕರೆ ಪ್ರದೇಶದಾಗ ಕೆರಿ ನಿರ್ಮಾಣ ಮಾಡಿ ಅದಕ್ಕ ಹಳ್ಳದ ನೀರು ತುಂಬಿಸೋ ಪ್ಲ್ಯಾನ್ ಇದಾಗಿತ್ತು. ಒಂದು ದೊಡ್ಡ ಫಿಲ್ಟರ್ ಕೂಡ ಅಳವಡಿಸಿದ್ರು. ಎಲ್ಲಾ ಕಾಮಗಾರಿ ಮುಗದ ಮ್ಯಾಲ ಕೆರಿಗೆ ನೀರು ತುಂಬಿಸಿದ್ರೂ ಕೆರ್‍ಯಾಗ ನೀರು ನಿಲ್ಲಲೇ ಇಲ್ಲ. ಹಿಂಗಾಗಿ ಆ ಕೆರಿ ಈಗ ಅಷ್ಟಕ್ಕ ಕೈ ಬಿಟ್ಟಾರ. ಈಗ ಕೆರ್‍ಯಾಗ ಗಿಡಾ, ಗಂಟಿ ಬೆಳದ ಹದಗೆಟ್ಟ ಹೋಗೇತ್ರಿ. ಒಂದು ವೇಳೆ ಜನಪ್ರತಿನಿಧಿಗಳು ಈ ಕೆರಿ ಸುದ್ದ ಮಾಡಿ ಕೆರ್‍ಯಾಗ ನೀರು ನಿಲ್ಲುವಂಗ ಮಾಡಿದ್ರ ಸಾಕಷ್ಟ ಅನುಕೂಲ ಅಕ್ಕತ್ರಿ. ಬೋರವೆಲ್‌ಗಳು ರಿಚಾರ್ಜ್ ಅಕ್ಕಾವ. ಬರೇ ಬಿಲ್ ತಗ್ಯಾಕ ಅಷ್ಟ ಇದನ್ನ ಬಳಕೆ ಮಾಡಬಾರದು ಅನ್ನೋ ಆಗ್ರಹ ಕೇಳಿ ಬಂದೈತಿ ನೋಡ್ರಿ.
ಇಡೀ ಗ್ರಾಮಕ್ಕ ಈ ಕೆರಿ ಅನುಕೂಲ ಆದೀತು ಅಂತ ಒಳ್ಳೆ ಉದ್ದೇಶ ಇಟಕೊಂಡು ಕೆಲಸ ಏನೋ ಮಾಡ್ಯಾರ. ಆದ್ರ ಆ ಯೋಜನೆ ಸಫಲ ಆಗ್ಲಿಲ್ಲ. ಹತ್ತಾರು ಎಕರೆ ಕೆರಿ ಈಗ ಅನಾತ ಆದಂಗ ಆಗೇತಿ. ವಿನಯ್ ಕುಲಕರ್ಣಿ ಅವರು ಶಾಸಕರಿದ್ದಾಗ ಈ ಕೆರಿ ಮಂಜೂರ ಆಗಿತ್ತು. ಮುಂದ ಸೀಮಾ ಮಸೂತಿ ಶಾಸಕರಿದ್ದಾಗ ಅವ್ರು ಕೆಲಸಾ ಆರಂಭ ಮಾಡಿದ್ರು. ಈಗ ಮತ್ತ ವಿನಯ್ ಕುಲಕರ್ಣಿ ಅವರ ಶಾಸಕರದಾರ. ಸ್ವಲ್ಪ ಮುತುವರ್ಜಿ ವಹಿಸಿ ಈ ಕೆರಿ ಪ್ಲ್ಯಾನ್ ಸಕ್ಸಸ್ ಆಗುವಂಗ ಮಾಡಿದ್ರ ಉಪ್ಪಿನ ಬೆಟಗೇರಿ ಮಂದಿಗೆ ಕೆರಿ ಅನ್ನೋ ಆಸ್ತಿ ಉಳದಂಗ ಅಕ್ಕತಿ. ಜೊತೆಗೆ ಅಕ್ಕಪಕ್ಕದ ರೈತರ ಬೋರ್‌ವೆಲ್‌ಗಳೂ ರಿಚಾರ್ಜ್ ಅಕ್ಕಾವು ಅನ್ನೋದು ಇಲ್ಲಿನ ಜನರ ಮನದಾಳದ ಮಾತ ಆಗೇತಿ ನೋಡ್ರಿ.
ಇದು ನಮ್ಮ ಊರು ನಮ್ಮ ಕೆರೆ ವಿಶೇಷ- ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/12/2024 02:02 pm