ಕುಂದಗೋಳ : ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕುಂದಗೋಳ ತಾಲೂಕಿನಾದ್ಯಂತ ಹಳ್ಳಗಳು ಭರ್ತಿಯಾಗಿ ಪ್ರವಾಹದ ಜೊತೆ ಈಗ ಪ್ರಯಾಣವು ಕಷ್ಟವಾಗಿ ಜನ ಪಾದಯಾತ್ರೆ ಮಾಡುವ ಸ್ಥಿತಿ ಎದುರಾಗಿದೆ.
ಕುಂದಗೋಳ ತಾಲೂಕಿನ ಹಿರೆನೇರ್ತಿ ಮತ್ತು ಚಿಕ್ಕನೇರ್ತಿ ಮಾರ್ಗ ಮದ್ಯ ಹಾಯ್ದು ಹೋಗುವ ಗೂಗಿ ಹಳ್ಳದ ಕಿರಿದಾದ ಸೇತುವೆ ಮಳೆ ಪ್ರವಾಹಕ್ಕೆ ಸಿಲುಕಿ ರಸ್ತೆ ಡಾಂಬರ್ ಕಿತ್ತು ಹೋಗಿ ಸಂಪರ್ಕ ಸ್ಥಗಿತಗೂಂಡಿದೆ.
ಯರಗುಪ್ಪಿ- ಚಿಕ್ಕನರ್ತಿ ಹಾಗೂ ಹೀರೆನರ್ತಿ - ಬೆನಕಹಳ್ಳಿ ಮೂರು ಹಳ್ಳಿಗಳಿಗೂ ಕಿರು ಸೇತುವೆಗಳು ಇದ್ದು, ಈ ಭಾಗದ ಗ್ರಾಮಸ್ಥರು ಹಾಗೂ ಪ್ರಯಾಣಿಕರು ನೆರೆ ಹಾವಳಿಯಿಂದ ಕಂಗಾಲಾಗಿದ್ದಾರೆ.
ಈ ಹಳ್ಳ ದಾಟಿ ಮುಂದಿನ ಗ್ರಾಮಕ್ಕೆ ಸಂಚರಿಸಲು ಪರ್ಯಾಯ ರಸ್ತೆ ಇಲ್ಲದೆ ಬೇರೆಡೆಯಿಂದ ಬಂದ ಸಾರ್ವಜನಿಕರು ಬೆನಕಹಳ್ಳಿಯಲ್ಲಿ ಸಾರಿಗೆ ಬಸ್ ಇಳಿದು ನಡೆದು ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನೂ ಹುಬ್ಬಳ್ಳಿಯಿಂದ ಬಂದ ಪ್ರಯಾಣಿಕರು ಚಿಕ್ಕನರ್ತಿ ಗ್ರಾಮದಲ್ಲಿ ಇಳಿದು ಆ ಹಳ್ಳದ ಸೇತುವೆ ಡಾಂಬರ್ ಹಾಳಾದ ಪರಿಣಾಮ ನಡೆದುಕೊಂಡೇ ಊರು ಸೇರಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಈ ಅವ್ಯವಸ್ಥೆ ಕಳೆದ ಹಲವಾರು ವರ್ಷಗಳಿಂದಿದೆ. ಪ್ರತಿ ಮಳೆಗಾಲದಲ್ಲಿ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಲೇ ದಿನಗಳಿಯುವುದು ಸಾಮಾನ್ಯವಾಗಿದೆ. ವಿಪರ್ಯಾಸವೆಂದರೆ ಚುನಾವಣೆ ಸಂದರ್ಭದಲ್ಲಿ ಮನೆ ಮನೆಗೆ ಬಂದು ಕಾಲು ಹಿಡಿಯುವ ಜನಪ್ರತಿನಿಧಿಗಳು ಈ ಅವ್ಯವಸ್ಥೆ ಸರಿಪಡಿಸುವ ಗೋಜಿಗೆ ಹೋಗದೆ ಇರುವುದು ವಿಷಾದವೇ ಸರಿ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
21/05/2022 11:08 pm