ಧಾರವಾಡ: ಹಾ.. ನಮಸ್ಕಾರ್ರೀ ಧಾರವಾಡ ಮಂದಿಗೆ.. ಬಾಳ ದಿನದ ಮ್ಯಾಲ ಮತ್ತ ಜವಾರಿ ಭಾಷೆದಾಗ ಒಂದ ಸುದ್ದಿ ತುಗೊಂಡ ಬಂದೇವಿ ನೋಡ್ರಿ.
ಈ ಕೆಂಪ ರಸ್ತೆ ಎಲ್ಲಿದ ಅಂತ ವಿಚಾರ ಮಾಡಬ್ಯಾಡ್ರಿ. ಅದನ್ನ ಎಳಿ ಎಳಿಯಾಗಿ ನಾವ್ ಹೇಳ್ತೇವಿ. ಇದು ಧಾರವಾಡದ ನವಲೂರು ಬ್ರಿಡ್ಜ್‌ನಿಂದ ತಡಸಿನಕೊಪ್ಪ ಗ್ರಾಮಕ್ಕ ಸಂಪರ್ಕ ಕಲ್ಪಿಸೋ ರಸ್ತೆ. ನೋಡ್ರಿ ಎಷ್ಟ ಚೆಂದ ಐತಲ್ಲಾ?
ಏನ್ ಚೆಂದೋ ಏನೋ? ಒಟ್ಟ ನಮ್ಮ ಜನಪ್ರತಿನಿಧಿಗಳ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಂಗ ಐತಿ ನೋಡ್ರಿ ಈ ರಸ್ತೆ. ಸುಮಾರು 3 ರಿಂದ 4 ಕಿಲೋಮೀಟರ್ ವ್ಯಾಪ್ತಿಯ ಈ ರಸ್ತೆಕ್ಕ ಡಾಂಬರ ಹಾಕೋ ಅವಶ್ಯಕತೆ ಐತಿ. ಅಲ್ಲಲ್ಲೆ ಸ್ವಲ್ಪ ಮುರ್ರಂ ಹಾಕಿ ಕೈ ಬಿಟ್ಟಾರೆ. ಮುಂದ ಹೋದ್ರ ಮೊಣಕಾಲುದ್ದ ದೊಡ್ಡು ದೊಡ್ಡು ತೆಗ್ಗ ಬಿದ್ದಾವ ಈ ರಸ್ತೆದಾಗ ಬರೋ ಜನ ದಿನಾ ಹೈರಾಣಾಗಾಕತ್ತಾರ ನೋಡ್ರಿ.
ಇದು ನಮ್ಮ ಶಾಸಕರಾದಂತ ಅರವಿಂದ ಬೆಲ್ಲದ ಸಾಹೇಬ್ರ ಕ್ಷೇತ್ರಕ್ಕ ಬರತೈತಂತ. ರಸ್ತೆ ಮಾಡಿಸಿಕೊಡ್ರಿ ಅಂತ ಅಲ್ಲಿನ ಜನಾನೂ ಅವ್ರಿಗೆ ಹೇಳ್ಯಾರಂತ ಆದ್ರೂ ರಸ್ತೆಕ್ಕ ಮಾತ್ರ ದುರಸ್ತಿ ಭಾಗ್ಯ ಬಂದಿಲ್ಲ. ನೋಡ್ರಿ ಬೆಲ್ಲದ ಸಾಹೇಬ್ರ. ಇನ್ನಮ್ಯಾಲರ ತಡಸಿನಕೊಪ್ಪ ಗ್ರಾಮಸ್ಥರಿಗೆ ಅನುಕೂಲ ಆಗುವಂಗ ಇದೊಂದ ಪಕ್ಕಾ ರಸ್ತೆ ಮಾಡಿಸಿ ಕೊಡ್ರಲಾ ಮತ್ತ.
-ಇದು ವೀಕ್ಷಕ ವರದಿ.
Kshetra Samachara
24/02/2022 10:53 am