ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಟ್ರಾಪಿಕ್ ಕಿರಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದು, ಮಂದಗತಿಯಲ್ಲಿ ಸಾಗಿದ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಿ ಎನ್ನುತ್ತಿದ್ದಾರೆ ಹುಬ್ಬಳ್ಳಿ ಜನ.
ಹೌದು..ಉತ್ತರ ಕರ್ನಾಟಕದ ಬಹುದೊಡ್ಡ ವ್ಯಾಪಾರ ಕೇಂದ್ರವಾಗಿರುವ ಹುಬ್ಬಳ್ಳಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಪಿಕ್ ಜಾಮ್ ಹೆಚ್ಚಾಗುತ್ತಿದೆ. ಟ್ರಾಫಿಕ್ ಕಿರಕಿರಿಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಟ್ರಾಫಿಕ್ ಕಿರಕಿರಿ ತಪ್ಪಿಸಿ ವಾಹನ ದಟ್ಟಣೆ ಕಡಿಮೆಗೊಳಿಸಲು ಪ್ಲೈಓವರ್ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ ಪ್ಲೈಓವರ್ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಜನರು ಹಿಡಿ ಶಾಪ ಹಾಕುವಂತಾಗಿದೆ. ಹುಬ್ಬಳ್ಳಿಗೆ ಪ್ಲೈಓವರ್ ಬೇಡ ಅಂತಾ ಹಲವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಜನರ ಆಕ್ರೋಶಕ್ಕೆ ಕಾರಣವಾಗಿದ್ದು ಟ್ರಾಫಿಕ್ ಕಿರಕಿರಿ. ಹೌದು ಕಾಮಗಾರಿ ಆರಂಭದಿಂದ ಸಿಕ್ಕಾಪಟ್ಟೆ ಟ್ರಾಫಿಕ್ ಆಗುತ್ತಿದೆ.
ಹುಬ್ಬಳ್ಳಿ ನಗರದಲ್ಲಿ ಚೆನ್ನಮ್ಮ ವೃತ್ತದ ಮೂಲಕ ಹಾದು ಹೋಗುವ ಪ್ಲೈ ಓವರ್ 3.6 ಕಿಲೊಮೀಟರ್ ಉದ್ದವಿದ್ದು, ಚನ್ನಮ್ಮ ವೃತ್ತದಿಂದ ಬಾಗಲಕೋಟೆ ರಸ್ತೆಯಲ್ಲಿ ದೇಸಾಯಿ ವೃತ್ತದವರೆಗೆ, ಧಾರವಾಡ ರಸ್ತೆಯಲ್ಲಿ ಹೊಸೂರವರೆಗೆ, ಗದಗ ರಸ್ತೆಯಲ್ಲಿ ಅಂಬೇಡ್ಕರ್ ವೃತ್ತದವರೆಗೆ ಒಟ್ಟು 3.6 ಕಿ.ಮೀ. ನಾಲ್ಕು ಪಥದ ಫ್ಲೈಓವರ್ ನಿರ್ಮಾಣವಾಗಲಿದೆ. ಮೂರು ಹಂತದ ಯೋಜನೆಗೆ 1,242 ಕೋಟಿ ವೆಚ್ಚದ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಯೋಜನೆ ವೆಚ್ಚ ಹೆಚ್ಚಾಗಿದೆ ಎಂಬ ಕೇಂದ್ರದ ಸೂಚನೆಯ ಹಿನ್ನೆಲೆಯಲ್ಲಿ ಮೂರು ಹಂತಗಳಾಗಿ ವಿಂಗಡಿಸಿ ಮೊದಲ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದರೆ ಕಾಮಗಾರಿ ಆರಂಭಕ್ಕೆ ಮುನ್ನ ವಾಹನಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಬೇಕಿತ್ತು. ಹುಬ್ಬಳ್ಳಿಯ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳನ್ನ ತುಂಬಿದ್ದು, ಬದಲಿ ಮಾರ್ಗದ ವ್ಯವಸ್ಥೆ ಮಾಡದೆ ಕಾಮಗಾರಿ ಆರಂಭಿಸಿರೋದು ಜನರ ಜೀವ ಹಿಂಡುವಂತಾಗಿದೆ. ಗಂಟೆಗಟ್ಟಲೆ ರಸ್ತೆಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಅವೈಜ್ಞಾನಿಕ ಬಿಆರ್ ಟಿಎಸ್ ಕಾಮಗಾರಿಯಿಂದ ಅವಳಿ ನಗರದ ನಡುವೆ ಟ್ರಾಫಿಕ್ ಸಮಸ್ಯೆಯಾಗಿದ್ರೆ, ಈಗ ಮುಂದಾಲೋಚನೆ ಮಾಡದೆ ಕೈಗೊಂಡಿರುವ ಪ್ಲೈಓವರ್ ಕಾಮಗಾರಿಯಿಂದ ಹುಬ್ಬಳ್ಳಿಯಲ್ಲಿ ಮತ್ತೊಂದಿಷ್ಟು ವರ್ಷಗಳ ಕಾಲ ವಾಹನ ಸವಾರರು ಟ್ರಾಪಿಕ್ ಕಿರಕಿರಿಯನ್ನ ಎದುರಿಸೋದು ಅನಿವಾರ್ಯವಾಗಲಿದೆ.
Kshetra Samachara
22/09/2021 05:10 pm