ಧಾರವಾಡ: ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಮಂಡಿಸಲಾಗುವ ಪ್ರಸಕ್ತ ವರ್ಷದ ಬಜೆಟ್ ಸಲುವಾಗಿ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದರು.
ಧಾರವಾಡದ ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಬಹುತೇಕ ಸಾರ್ವಜನಿಕರು ರಸ್ತೆ, ಮೂಲ ಸೌಕರ್ಯ, ಪಾರ್ಕ್ ಗಳ ಅಭಿವೃದ್ಧಿ, ಸಮುದಾಯ ಭವನಗಳ ಅಭಿವೃದ್ಧಿ ಸಲುವಾಗಿ ಬಜೆಟ್ ನಲ್ಲಿ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಲಕ್ಷ್ಮಣ ಬಕ್ಕಾಯಿ ಮಾತನಾಡಿ, ಕಲಾಭವನದ ಮೈದಾನವನ್ನು ಉತ್ತಮ ಪಾರ್ಕ್ ಆಗಿ ಪರಿವರ್ತನೆ ಮಾಡಬೇಕು. ಉದ್ಯಾನವನಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಕೆಲವು ಕಡೆಗಳಲ್ಲಿ ರಸ್ತೆಗಳು ತೀರಾ ಹದಗೆಟ್ಟಿದ್ದು, ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲ ರಸ್ತೆಗಳ ಸುಧಾರಣೆ ಮಾಡಬೇಕು ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟು ಅಭಿವೃದ್ಧಿ ಕಾರ್ಯಗಳನ್ನು ಕಾರ್ಯ ರೂಪಕ್ಕೆ ತರಬೇಕು ಎಂದರು.
ಇನ್ನು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ, ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಸಾರ್ವಜನಿಕರು ಮೂಲಭೂತ ಸೌಕರ್ಯ ಸ್ವಚ್ಛತೆ ಬಗ್ಗೆ ಉಪಯುಕ್ತವಾದ ಸಲಹೆ ನೀಡಿದ್ದಾರೆ. ಎಲ್ಲೆಲ್ಲಿ ಪಾರ್ಕಗಳ ಜಾಗ ಅತಿಕ್ರಮಣವಾಗಿದೆಯೋ ಅದನ್ನು ತೆರವುಗೊಳಿಸುವ ಕಾರ್ಯ ಕೂಡ ನಡೆಯಲಿದೆ ಎಂದರು.
ಶೀಘ್ರವೇ ಪಾಲಿಕೆ ವತಿಯಿಂದ ಆಯವ್ಯಯ ಮಂಡನೆಯಾಗಲಿದ್ದು, ಬಜೆಟ್ ನಲ್ಲಿ ಸಾರ್ವಜನಿಕರು ಸೂಚಿಸಿದ ಸಲಹೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸುರೇಶ ಇಟ್ನಾಳ ಇದೇ ಸಂದರ್ಭದಲ್ಲಿ ಹೇಳಿದರು.
ಉಳಿದಂತೆ ಸಮಾಲೋಚನೆಯಲ್ಲಿ ತೆರಿಗೆ ವಸೂಲಾತಿ, ತೆರಿಗೆ ಹೆಚ್ಚಳ ಸೇರಿದಂತೆ ಇತರ ವಿಷಯಗಳ ಬಗ್ಗೆಯೂ ಚರ್ಚೆಯಾಯಿತು.
Kshetra Samachara
09/02/2021 02:43 pm