ಹುಬ್ಬಳ್ಳಿ: ಸರ್ಕಾರದ ತಾರತಮ್ಯ, ರಾಜಕೀಯ ಪಕ್ಷಗಳ ಕಿತ್ತಾಟದಲ್ಲಿ ಮಹತ್ವದ ಯೋಜನೆಗಳು ಹಳ್ಳ ಹಿಡಿಯುತ್ತಿವೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಾರಿಯಾದ ಅದೆಷ್ಟೋ ಯೋಜನೆಗಳಿಗೆ ಬೊಮ್ಮಾಯಿ ಸರ್ಕಾರ ಕೊಕ್ಕೆ ಹಾಕಿದೆ. ಸಮಾಜ ಕಲ್ಯಾಣ ಇಲಾಖೆ ಅಡಿ ನಿರ್ಮಾಣವಾಗುತ್ತಿರುವ ಬೃಹತ್ ಕಟ್ಟಡಕ್ಕೆ ಅನುದಾನದ ಕೊರತೆಯಿಂದ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ? ಈ ಸ್ಟೋರಿ ನೋಡಿ...
ಈ ಬೃಹತ್ ಕಟ್ಟಡವನ್ನೊಮ್ಮೆ ಕಣ್ತುಂಬ ನೋಡಿ ಬಿಡಿ. ಇದು ಒಂದಲ್ಲ, ಎರಡಲ್ಲ ಬರೋಬ್ಬರಿ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಈ ಕಟ್ಟಡ ಜನರ ಉಪಯೋಗಕ್ಕೆ ಅನುಕೂಲವಾಗುತ್ತಿತ್ತು. ಆದರೆ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸರ್ಕಾರದ ನಿರ್ಲಕ್ಷ್ಯತನದಿಂದ ಐದು ವರ್ಷದಿಂದ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಸಿದ್ಧರಾಮಯ್ಯನವರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಡಾ.ಬಾಬು ಜಗಜೀವನರಾಮ್ ಸಮುದಾಯ ಭವನ ಬಿಡುಗಡೆಯಾಗಿತ್ತು. ಹುಬ್ಬಳ್ಳಿಯ ಪಡದಯ್ಯನ ಹಕ್ಕಲದಲ್ಲಿ ಅಂದಿನ ಸಮಾಜ ಕಲ್ಯಾಣ ಇಲಾಖೆಯ ಸಚಿವ ಹೆಚ್.ಆಂಜನೇಯ ಭೂಮಿ ಪೂಜೆ ಮಾಡಿ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ, ಸರ್ಕಾರದಿಂದ ಕಟ್ಟಡದ ಕಾಮಗಾರಿ ಮಾಡಿದ ಗುತ್ತಿಗೆದಾರನಿಗೆ ಹಣ ಬಿಡುಗಡೆಯಾಗಿಲ್ಲ. ಅದೇ ಕಾರಣಕ್ಕೆ ಗುತ್ತಿಗೆದಾರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಕೈ ತೊಳೆದುಕೊಂಡಿದ್ದಾನೆ. ಈ ಸಂಬಂಧ ಸ್ಥಳೀಯ ಶಾಸಕ ಪ್ರಸಾದ ಅಬ್ಬಯ್ಯ ಸರ್ಕಾರದ ಗಮನಕ್ಕೆ ತಂದರೂ ಕೂಡ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಕ್ಯಾರೇ ಅಂದಿಲ್ಲ.
ಸರ್ಕಾರದ ಕೈಯಲ್ಲಿ ಗುತ್ತಿಗೆದಾರರೋ ಅಥವಾ ಗುತ್ತಿಗೆದಾರ ಕೈಯಲ್ಲಿ ಸರ್ಕಾರವೋ ಎಂಬುವಂತ ಅನುಮಾನ ವ್ಯಕ್ತವಾಗಿದೆ. ಕಳೆದ ಜನವರಿಯಲ್ಲಿಯೇ ಕೆಲಸ ಪ್ರಾರಂಭಿಸಲು ಗುತ್ತಿಗೆದಾರನಿಗೆ ಸಮಾಜ ಕಲ್ಯಾಣ ಇಲಾಖೆ ಖಡಕ್ ಆದೇಶ ಮಾಡಿದೆ. ಆದರೂ ಸಹಿತ ಗುತ್ತಿಗೆದಾರ ಇತ್ತ ತಿರುಗಿ ನೋಡಿಲ್ಲ. ಕೆಲಸವನ್ನು ಕೂಡ ಆರಂಭಿಸಿಲ್ಲ. ಇದೇ ಕಾರಣಕ್ಕೆ ಜಿಲ್ಲಾಧಿಕಾರಿ ಗುರುದತ್ತ ಹೆಗ್ಡೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಎರಡು ತಿಂಗಳ ಒಳಗಾಗಿಯೇ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಿದ್ದಾರೆ. ಒಂದು ವೇಳೆ ಕಾಮಗಾರಿ ಆರಂಭಿಸದೇ ಹೋದರೇ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸಿ ಹೊಸದಾಗಿ ಟೆಂಡರ್ ಕರೆಯುವುದಾಗಿ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ 9 ಕೋಟಿ ರೂ. ಗುತ್ತಿಗೆದಾರನಿಂದ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಇನ್ನಾದರೂ ಸರ್ಕಾರ ಇಂತಹ ಗುತ್ತಿಗೆದಾರನಿಗೆ ಬಿಸಿ ಮುಟ್ಟಿಸಿ ಕಾಮಗಾರಿ ಪೂರ್ಣ ಮಾಡಬೇಕಿದೆ. ಸರ್ಕಾರದ ಯೋಜನೆ ಸಮರ್ಪಕವಾಗಿ ಸಾರ್ವಜನಿಕರ ಕೈ ಸೇರಬೇಕು ವಿನಃ ನೀರಿನಲ್ಲಿ ಹೋಮವಾಗಬಾರದು ಎಂಬುದು ನಮ್ಮ ಆಶಯ.
Kshetra Samachara
23/08/2022 02:53 pm