ಹುಬ್ಬಳ್ಳಿ: ಬಹು ನಿರೀಕ್ಷಿತ ಬಿಆರ್‌ಟಿಎಸ್ ತಂಗುದಾಣಗಳು ಶಿಥಿಲಗೊಂಡ ದೇವರ ಫೋಟೊಗಳನ್ನು ಎಸೆಯುವ ತಾಣವಾಗುತ್ತಿವೆ ಎಂದು ಧಾರವಾಡ ನೇಚರ್ ರಿಸರ್ಚ್ ಸೆಂಟರ್ ಅಸಮಾಧಾನ ವ್ಯಕ್ತಪಡಿಸಿದೆ.
ಹುಬ್ಬಳ್ಳಿಯ ಶ್ರೀನಗರ ವೃತ್ತದ ಬಳಿಯ ಬಿಆರ್‌ಟಿಎಸ್ ಬಸ್ ನಿಲ್ದಾಣ ಹಾಗೂ ಫ್ಲೈ ಓವರ್‌ನಲ್ಲಿ ಶಿಥಿಲಗೊಂಡ ದೇವರ ಫೊಟೋಗಳನ್ನು ತಂದು ಇಡಲಾಗುತ್ತಿದೆ.
ಜಾಹೀರಾತಿನ ಬೃಹತ್ ಫಲಕ ಅಳವಡಿಸಲು ಮತ್ತು ವರ್ಚುವಲ್ ಗಾರ್ಡನ್‌ಗಾಗಿ ಮೀಸಲಿಟ್ಟ ಸ್ಥಳದಲ್ಲಿ ಈಗ ಬೀದಿ ದೇವರು ಜಾಗೆ ಪಡೆಯುತ್ತಿವೆ. ಇದಲ್ಲದೆ ಉಣಕಲ್ ಕೆರೆಗೆ ಅಳವಡಿಸಲಾದ ಕಬ್ಬಿಣದ ತಡೆಗೋಡೆಗೆ ದೇವರ ಚಿತ್ರಪಟ ನೇತು ಹಾಕಲಾಗಿದೆ. ಹೀಗೆ ಇಟ್ಟ ಫೋಟೋಗಳು ಗಾಳಿಯ ರಭಸಕ್ಕೆ ಬಿದ್ದು ಗಾಜು ಒಡೆದು ನೂರಾರು ಚೂರುಗಳಾಗಿ ಪಾದಚಾರಿಗಳಿಗೆ ಅಪಾಯಕ್ಕೆ ಎಡೆಮಾಡಿಕೊಡುತ್ತಿವೆ.
ಕೋವಿಡ್ ಹಿನ್ನೆಲೆಯಲ್ಲಿ ಉಣಕಲ್ ಕೆರೆಗೆ ಪ್ರವೇಶ ನಿಷೇಧಗೊಂಡ ಹಿನ್ನೆಲೆಯಲ್ಲಿ ಬಹುತೇಕ ಚಿತ್ರಪಟಗಳು ಕೆರೆಗೆ ಹಾರವಾಗಿಲ್ಲ. ಹೀಗಾಗಿ ಬಿಆರ್‌ಟಿಎಸ್ ನಿಲ್ದಾಣದಲ್ಲಿ ಸ್ಥಾನಪಡೆದಿವೆ. ಇಲ್ಲವಾಗಿದ್ದರೆ ಈ ಫೋಟೋಗಳು ಕೆರೆ ಪಾಲಾಗುತ್ತಿದ್ದವು. ಕೇವಲ ಮೂರು ತಿಂಗಳಲ್ಲಿ ನೂರಾರು ಚಿತ್ರಪಟಗಳನ್ನು ಕೆರೆಯ ತಡೆಗೋಡೆ ಮತ್ತು ಬಿಆರ್‌ಟಿಎಸ್ ಫ್ಲೈ ಓವರ್ ಬುಡದಲ್ಲಿ ಸೇರಿಸಿಡಲಾಗಿದೆ.
ದೇವರ ಫೋಟೋ ಶಿಥಿಲಗೊಂಡಿತ್ತು ಎಂಬ ಕಾರಣಕ್ಕೆ ಎಲ್ಲೆಂದರಲ್ಲಿ ಎಸೆಯುವುದು ಎಂತಹ ಭಕ್ತಿ. ಯಾವ ಪುರುಷಾರ್ಥ ನಗರದ ಅಂದಗೆಡಿಸುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಧಾರವಾಡ ನೇಚರ್ ರಿಸರ್ಚ್ ಸೆಂಟರ್ ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸಿದೆ.
Kshetra Samachara
02/12/2020 02:29 pm