ಅನ್ನದಾತನ ಬಾಳು ಅದು ಕಣ್ಣೀರಿನ ಗೋಳು ಎನ್ನುವ ಮಾತಿದೆ. ಯಾಕಂದ್ರೆ ಆತನಿಗೆ ಕಾಡುವ ಸಮಸ್ಯೆಗಳು ಒಂದಲ್ಲ, ಎರಡಲ್ಲ. ಅತಿವೃಷ್ಟಿ, ಅನಾವೃಷ್ಟಿ, ಬೀಜ-ಗೊಬ್ಬರದಲ್ಲಿ ಮೋಸ, ತೂಕದಲ್ಲಿ ಮೋಸ, ಬೆಳೆರೋಗ. ಹೀಗೆ ಅನ್ನದಾತನಿಗೆ ಎದುರಾಗುವ ಸಮಸ್ಯೆಗಳು ಒಂದಲ್ಲ ಎರಡಲ್ಲ. ಆದ್ರೆ ಈ ಎಲ್ಲ ಸಮಸ್ಯೆಗಳ ನಡುವೆಯೂ ಸಹಜ, ಸಾವಯವ ಕೃಷಿ ಮಾಡಲು ಸಾಧ್ಯ. ಮತ್ತು ಉತ್ತಮ ಲಾಭ ಪಡೆಯಲು ಸಾಧ್ಯ ಅನ್ನೋದಕ್ಕೆ ಈ ರೈತ ಜ್ವಲಂತ ನಿದರ್ಶನವಾಗಿದ್ದಾರೆ.
ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಶೇಖಪ್ಪ ಶಾನವಾಡ ಎಂಬ ಈ ರೈತ ಎಲ್ಲ ಸಮಸ್ಯೆಗಳನ್ನ ಸಮರ್ಥವಾಗಿ ಎದುರಿಸಿ ವರ್ಷಕ್ಕೆ ಮೂರು ಲಕ್ಷಕ್ಕೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಉತ್ತಮ ಬೆಳೆ ಬೆಳೆಯಲು ಮಳೆಯ ಮೇಲೆ ಅವಲಂಬಿತರಾಗದೇ ತಮ್ಮ ಹೊಲದಲ್ಲೇ ಕೃಷಿಹೊಂಡ ನಿರ್ಮಿಸಿಕೊಂಡು ಪುಷ್ಕಳ ಫಲ ಪಡೆಯುತ್ತಿದ್ದಾರೆ.
ಹಾಗಾದ್ರೆ ಇದೆಲ್ಲ ಹೇಗೆ ಸಾಧ್ಯ ಆಯ್ತು ಅಂತೀರಾ? ಅದಕ್ಕೆ ಇಲ್ಲಿದೆ ಉತ್ತರ. ತಮ್ಮ ಸ್ನೇಹಿತರಿಂದ ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ಬಗ್ಗೆ ಮಾಹಿತಿ ಪಡೆದ ಇವರು ಆ ಬಗ್ಗೆ ಕುತೂಹಲ ಮೂಡಿಸಿಕೊಂಡಿದ್ದಾರೆ. ಜೊತೆಗೆ ಈಗಾಗಲೇ ಕೃಷಿಹೊಂಡ ನಿರ್ಮಿಸಿಕೊಂಡು ಅದರ ಲಾಭ ಪಡೆಯುತ್ತಿರುವ ಇತರ ರೈತರ ಅಭಿಪ್ರಾಯ ಕೇಳಿದ್ದಾರೆ. ನಂತರ ಶೇಖಪ್ಪ ಅವರು ತಮ್ಮ 6ಎಕರೆ ಹೊಲದಲ್ಲಿ 100 ಬೈ 100 ಅಡಿ ಸುತ್ತಳತೆ ಜಾಗದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು ಸಹಜ ಸುಸ್ಥಿರ ಕೃಷಿ ಮಾಡ್ತಿದ್ದಾರೆ. ಈ ಬಗ್ಗೆ ರೈತ ಶೇಖಪ್ಪ ಶಾನವಾಡ ಅವರೊಂದಿಗೆ ನಮ್ಮ ವರದಿಗಾರ ನಾಗರಾಜ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಬೀಜ ಗೊಬ್ಬರಕ್ಕಾಗಿ ಅವರಿವರ ಬಳಿ ಅಲೆಯದೇ ಫಾರ್ಮರ್ ಪ್ರೊಡಕ್ಷನ್ ಆರ್ಗನೈಸೇಷನ್ ಕಲ್ಮೇಶ್ವರ ಸಂಘದಿಂದ ಇವರು ಬೀಜ- ಗೊಬ್ಬರ ಪಡೆಯುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಸದೇ ಇರೋದ್ರಿಂದ ನಮ್ಮ ಹೊಲದ ಮಣ್ಣಿನ ಆರೋಗ್ಯ ಸ್ಥಿರವಾಗಿರುತ್ತದೆ ಎಂಬುದು ಶೇಖಪ್ಪ ಅವರ ಅಭಿಪ್ರಾಯ.
ಕಷ್ಟದೊಳನ್ನವ ದುಡಿವನೆ ತ್ಯಾಗಿ
ಸೃಷ್ಟಿ ನಿಯಮದೊಳಗವನೇ ಭೋಗಿ
ಎಂಬ ಕುವೆಂಪು ಅವರ ಮಾತಿನಂತೆ ಬಲ್ಲರವಾಡ ಗ್ರಾಮದ ಸಾವಯವ ಕೃಷಿಕ ಶೇಖಪ್ಪ ಶಾನವಾಡ ಅವರು ಭಿಮಾನಿಯಾಗಿ, ಸಹಜ ಕೃಷಿ ಮಾಡುತ್ತಿದ್ದಾರೆ. ಈ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
Kshetra Samachara
08/02/2021 07:01 pm