ಹುಬ್ಬಳ್ಳಿ: ಏಷ್ಯಾದ ಅತೀ ದೊಡ್ಡ ಕೃಷಿ ಉತ್ಪನ್ನ ಮಾರುಕಟ್ಟೆ ಅಂದ್ರೆ ಅದು ನಮ್ಮ ಹುಬ್ಬಳ್ಳಿ ಎಪಿಎಮ್‌ಸಿ. ಆದ್ರೆ ಇಲ್ಲಿ ರೈತರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಕೆಲವೊಂದು ಇದ್ದೂ ಇಲ್ಲದಂತಾಗಿವೆ. ಅಷ್ಟಕ್ಕೂ ಹುಬ್ಬಳ್ಳಿ ಎಪಿಎಮ್‌ಸಿ ಯಲ್ಲಿ ಏನೆಲ್ಲಾ ಸೌಲಭ್ಯಗಳಿಲ್ಲ ಎಂಬುದನ್ನು ನಾವು ತೋರಿಸ್ತೀವಿ ನೋಡಿ..
ಹೌದು,,,,, ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಎಂದು ಪ್ರಸಿದ್ಧಿ ಹೊಂದಿರುವ ಹುಬ್ಬಳ್ಳಿ ಎಪಿಎಮ್‌ಸಿಗೆ ದಿನಂಪ್ರತಿ ಸಾವಿರಾರು ರೈತರು ಬರುತ್ತಾರೆ. ಆದ್ರೆ ಅವರಿಗೆ ಸಿಗಬೇಕಾದ ಸೌಕರ್ಯಗಳು ಮಾಯವಾಗಿವೆ. ಇದಕ್ಕೆಲ್ಲಾ ಕಾರಣ ಆಡಳಿತ ಮಂಡಳಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತ ಭವನವನ್ನು ನಿರ್ಮಾಣ ಮಾಡಿದ್ದಾರೆ. ಆದ್ರೆ ಅದು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ. ರೈತ ಭವನದ ಗೋಡೆಗಳು ಬಿರುಕು ಬಿಟ್ಟಿವೆ. ಬಂದಂತ ರೈತರಿಗೆ ಹಾಸಿಗೆ ವ್ಯವಸ್ಥೆ ಇದ್ರೂ ಯಾವುದೇ ರೀತಿಯ ಪ್ರಯೋಜನವಿಲ್ಲ.
ಎಪಿಎಮ್‌ಸಿ ಆಡಳಿತ ಮಂಡಳಿ ಹೆಸರಿಗಷ್ಟೇ ರೈತ ಭವನ ನಿರ್ಮಾಣ ಮಾಡಿ ಕೈತೊಳೆದುಕೊಂಡಿದೆ. ಇದಷ್ಟೇ ಅಲ್ದೆ ಕುಡಿಯುವ ನೀರು, ಶೌಚಾಲಯ , ವಸತಿ ವ್ಯವಸ್ಥೆ ಇಲ್ಲದೇ ನಿತ್ಯವೂ ರೈತರು ಪರದಾಡುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ರೈತರು ಹುಬ್ಬಳ್ಳಿ ಮಾರುಕಟ್ಟೆಗೆ ಬರುತ್ತಾರೆ. ಬೆಳೆ ಮಾರಾಟವಾಗುವವರೆಗೂ ಅಲ್ಲಿಯೇ ಇರುತ್ತಾರೆ, ಆದ್ರೆ ಅನ್ನದಾತನಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿ ನುಂಗಿ ಹಾಕಿದೆ. ಸೂಕ್ತವಾದ ಶೌಚಾಲಯವಿಲ್ಲ. ಒಳಗೆ ಹೋದ್ರೆ ಸಾಕು ಗಬ್ಬು ವಾಸನೆ, ಕುಡಿಯುವ ನೀರಿಗಾಗಿ ರೈತರು ಪರದಾಡುವಂತಾಗಿದೆ. ರೈತರಿಗೆ ಸೌಲಭ್ಯ ಕಲ್ಪಿಸುವಲ್ಲಿ ಎಪಿಎಂಸಿ ಆಡಳಿತ ವರ್ಗ ಕಣ್ಣಿಗೆ ಕಂಡ್ರು ಕಾಣದಂತೆ ವರ್ತನೆ ಮಾಡ್ತಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಅನ್ನದಾತ ಅಸಮಾಧಾನ ವ್ಯಕ್ತಪಡಿಸಿದ್ದಾನೆ.
ಹೆಸರಿಗಷ್ಟೇ ಹುಬ್ಬಳ್ಳಿ ಎಪಿಎಮ್‌ಸಿ ಅತೀ ದೊಡ್ಡದು ಎನಿಸುವ ಬದಲು, ಅಲ್ಲಿ ಬರುವಂತಹ ರೈತರಿಗೆ ಮೂಲಭೂತ ಸೌಕರ್ಯಗಳನ್ನು ಅಲ್ಲಿನ ಆಡಳಿತ ಮಂಡಳಿ ಕಲ್ಪಿಸಿಕೊಡಬೇಕು. ಕಾಟಾಚಾರಕ್ಕೆ ಆಡಳಿತ ನಡೆಸಬಾರದು, ಮಾರುಕಟ್ಟೆಗೆ ಬಂದ ಅನ್ನದಾತನ ಅಳಲನ್ನು ಕೇಳಬೇಕು. ಕೂಡಲೇ ಎಪಿಎಮ್‌ಸಿಯಲ್ಲಿ ಇರುವಂತಹ ಸಮಸ್ಯೆಗಳನ್ನು ಆದಷ್ಟು ಬೇಗನೆ ಬಗೆ ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ ಹುಬ್ಬಳ್ಳಿ.
Kshetra Samachara
14/12/2024 03:52 pm