ಧಾರವಾಡ: ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕೊರೊನಾ ಸ್ಪೋಟಗೊಂಡ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡ ಸೇರಿದಂತೆ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದದ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಎಂ ಜೊತೆಗಿನ ವೀಡಿಯೋ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಎಸ್‌ಡಿಎಂನಲ್ಲಿ ಈಗಾಗಲೇ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. 281 ಜನ ಸೋಂಕಿತರ ಪೈಕಿ ಕೇವಲ 6 ಜನರಲ್ಲಿ ಮಾತ್ರ ರೋಗ ಲಕ್ಷಣಗಳು ಕಂಡು ಬಂದಿವೆ. ಉಳಿದವರೆಲ್ಲರೂ ಆರೋಗ್ಯವಾಗಿದ್ದಾರೆ ಎಂದರು.
ಇನ್ನೂ 1800 ಜನರನ್ನು ತಪಾಸಣೆಗೊಳಪಡಿಸಲಾಗಿದ್ದು, ಅವರ ವರದಿಗಾಗಿ ಕಾಯುತ್ತಿದ್ದೇವೆ. ನಾಳೆ ಬೆಳಿಗ್ಗೆ ವರದಿ ಬರಲಿವೆ. ಮುಖ್ಯಮಂತ್ರಿಗಳು ಕಂಟೈನ್ಮೆಂಟ್ ಝೋನ್ ಮಾಡುವಂತೆ ಹೇಳಿದ್ದಾರೆ. ಇನ್ನೂ ಸ್ವಲ್ಪ ದಿನಗಳ ಕಾಲ ಎಸ್‌ಡಿಎಂ ಓಪಿಡಿಯನ್ನು ಬಂದ್ ಮಾಡಲಾಗುತ್ತದೆ. ಜಿಲ್ಲೆಯ ಜನತೆ ಆತಂಕಪಡಬೇಕಿಲ್ಲ ಎಂದರು.
281 ಜನ ಕೋವಿಡ್ ಎರಡನೇ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ಕೊರೊನಾ ಸೋಂಕಿನ ಸ್ವರೂಪ ಭಯಾನಕವಾಗಿಲ್ಲ. ಎಲ್ಲರೂ ಕ್ಷೇಮವಾಗಿದ್ದಾರೆ. ಹೀಗಾಗಿ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಜನಸಾಂಧ್ರತೆ ಇರುವ ಪ್ರದೇಶಗಳಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿಗಳು ಶೀಘ್ರ ಬರಲಿವೆ ಎಂದರು.
ಎಸ್‌ಡಿಎಂ ಆಸ್ಪತ್ರೆಯ ಓಪಿಡಿಯನ್ನು ರವಿವಾರದವರೆಗೆ ಮಾತ್ರ ಬಂದ್ ಮಾಡಲಾಗಿತ್ತು. ಆದರೆ, ಸೋಮವಾರದವರೆಗೂ ಅದನ್ನು ಬಂದ್ ಮಾಡಲಾಗುವುದು. ನಾವೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸುತ್ತೇವೆ. 260 ವ್ಯಾಕ್ಸಿನ್ ಟೀಂಗಳಿವೆ. ಆದಷ್ಟು ಬೇಗ ಎಲ್ಲರೂ ಎರಡನೇ ಡೋಸ್ ಪಡೆದುಕೊಳ್ಳಬೇಕು ಎಂದರು.
Kshetra Samachara
27/11/2021 07:54 pm