ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಶೈಕ್ಷಣಿಕ ಕ್ಯಾಂಪಸ್ ಧಾರವಾಡದಲ್ಲಿ ಸಜ್ಜುಗೊಂಡು ನಿಂತಿದೆ.
ಧಾರವಾಡ ತಾಲೂಕಿನ ತಡಸಿನಕೊಪ್ಪ ಬಳಿಯ ಸುಮಾರು 60 ಎಕರೆಯಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ (ಐಐಐಟಿ, ಇಂಡಿಯನ್ ಇನ್ಸಿಟ್ಯೂಟ್ ಆಫ್ ಇನ್ಫಾರಮೇಶನ್ ಟೆಕ್ನಾಲಜಿ) ಕಾಯಂ ಕ್ಯಾಂಪಸ್ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ನೂತನ ಕ್ಯಾಂಪಸ್ ಇದಾಗಿರುವುದರಿಂದ ದೇಶದ ಇತರ ಐಐಐಟಿಗಳಿಗಿಂತ ಭಿನ್ನ ಹಾಗೂ ಮಾಹಿತಿ ತಂತ್ರಜ್ಞಾನ ಕಲಿಕೆಯನ್ನು ಹೆಚ್ಚು ಪ್ರಾಯೋಗಿಕಗೊಳಿಸುವ ಎಲ್ಲ ಸವಲತ್ತುಗಳನ್ನು ಕಲ್ಪಿಸಿರುವುದು ಇದರ ವೈಶಿಷ್ಟ್ಯ.
ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜಾಗತಿಕಮಟ್ಟದ ಸಂಸ್ಥೆಯನ್ನಾಗಿಸುವ ಪ್ರಮುಖ ಉದ್ದೇಶದೊಂದಿಗೆ ಭಾರತ ಸರ್ಕಾರ 2015ರಲ್ಲಿ ಧಾರವಾಡಕ್ಕೆ ಐಐಐಟಿ ಮಂಜೂರು ಮಾಡಿತು. ಅದೇ ವರ್ಷ ಹುಬ್ಬಳ್ಳಿಯ ಐಟಿ ಪಾರ್ಕಿನ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲಾಗಿತ್ತು. ಈಗಾಗಲೇ ಮೂರು ಬ್ಯಾಚ್‌ಗಳು ಇಲ್ಲಿಂದ ಪದವಿ ಪಡೆದುಕೊಂಡು ಹೋಗಿವೆ.
ಸುಮಾರು 114 ಕೋಟಿ ರೂಪಾಯಿ ವೆಚ್ಚದಲ್ಲಿ ಶೈಕ್ಷಣಿಕ ಕಟ್ಟಡ, ಲ್ಯಾಬರೋಟರಿ, ಗ್ರಂಥಾಲಯ ಸೇರಿ ಎಲ್ಲ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಮಾಹಿತಿ ತಂತ್ರಜ್ಞಾನ ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಭಾರತವನ್ನು ಮುಂಚೂಣಿಗೆ ಕೊಂಡೊಯ್ಯುವ ಗುರಿಯೊಂದಿಗೆ ಐಐಐಟಿ ಧಾರವಾಡ ಸಂಸ್ಥೆಯನ್ನು ಆಧುನಿಕ ವಿನ್ಯಾಸ ಹಾಗೂ ಚಾಲ್ತಿಯಲ್ಲಿರುವ ಮೂಲ ಸೌಕರ್ಯಗಳೊಂದಿಗೆ ನಿರ್ಮಿಸಲಾಗಿದೆ.
ಐದು ಮಹಡಿಯ ಅಕ್ಯಾಡೆಮಿಕ್ ಬ್ಲಾಕ್‌ನಲ್ಲಿ 30 ವಿಸ್ತಾರವಾದ ಕ್ಲಾಸ್ ರೂಮ್‌ಗಳಿವೆ. ಕನಿಷ್ಠ 80 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದಾದ ಕ್ಲಾಸ್ ರೂಮ್ ಇವಾಗಿವೆ. 240 ಆಸನಗಳಿರುವ ಎರಡು ರೂಮ್‌ಗಳನ್ನೂ ಸಹ ನಿರ್ಮಿಸಲಾಗಿದೆ. ಪ್ರಯೋಗಾಲಯ, ಎಲೆಕ್ಟ್ರಾನಿಕ್ ಲ್ಯಾಬ್, ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಎರಡು ಹಾಸ್ಟೆಲ್ ನಿರ್ಮಿಸಲಾಗಿದೆ.
ಇನ್ಫೋಸಿಸ್ ಸಂಸ್ಥೆಯವರು ಸಿಎಸ್‌ಆರ್ ಅಡಿ ವಿದ್ಯಾರ್ಥಿನಿಯರಿಗೆ ನೂರು ಕೊಠಡಿಯ ಹಾಸ್ಟೆಲ್ ಹಾಗೂ ಕಂಪೌಂಡ್ ಕಟ್ಟಿಸಿಕೊಟ್ಟಿದ್ದಾರೆ.
ಒಟ್ಟಾರೆಯಾಗಿ ಐಐಐಟಿಯಲ್ಲಿರುವ ಸೌಲಭ್ಯ ಹಾಗೂ ಏನೆಲ್ಲ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿ ಕಟ್ಟಲಾಗಿದೆ ಎಂಬುದರ ಬಗ್ಗೆ ಐಐಐಟಿ ನಿರ್ದೇಶಕ ಡಾ.ಕವಿ ಮಹೇಶ ಅವರೇ ಹೇಳಿದ್ದಾರೆ ಕೇಳಿ
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಕರ್ನಾಟಕ ಸರ್ಕಾರ ಹಾಗೂ ಕೈಗಾರಿಕೆ ಪಾಲುದಾರ ಕಿಯೋನಿಕ್ಸ್ ಸಹಯೋಗದೊಂದಿಗೆ ಐಐಐಟಿ ಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಬಿ.ಟೆಕ್ ಹಾಗೂ ಪಿ.ಎಚ್‌ಡಿ ಬಗ್ಗೆಯೂ ಶಿಕ್ಷಣ ನೀಡಲಾಗುತ್ತಿದೆ. ಪ್ರಸ್ತುತ ಮೂರು ಕೋರ್ಸ್‌ಗಳನ್ನು ಇಲ್ಲಿ ಕಲಿಸಲಾಗುತ್ತಿದೆ. 1200 ವಿದ್ಯಾರ್ಥಿಗಳು ಸದ್ಯ ಕಲಿಯುತ್ತಿದ್ದಾರೆ. ಒಟ್ಟು 4 ಸಾವಿರ ವಿದ್ಯಾರ್ಥಿಗಳಿಗೆ ಇಲ್ಲಿ ಕಲಿಯಲು ಅನುಕೂಲ ಕಲ್ಪಿಸುವಷ್ಟು ದೊಡ್ಡ ಕ್ಯಾಂಪಸ್ ಇದಾಗಿದ್ದು, ಭವಿಷ್ಯದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಬಹುದಾಗಿದೆ.
Kshetra Samachara
10/11/2021 09:24 pm