ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಇಡೀ ರಾಜ್ಯದಲ್ಲೇ ಎರಡನೇ ದೊಡ್ಡ ವಿಶ್ವವಿದ್ಯಾಲಯ. ಇದಕ್ಕೆ ಇದರದ್ದೇ ಆದ ಪ್ರತಿಷ್ಠೆ ಕೂಡ ಇದೆ. ಅದರಲ್ಲೂ ಸಂಶೋಧನೆಯಲ್ಲಿ ಹೆಚ್ಚು ಹೆಸರು ಮಾಡಿದ ಕೀರ್ತಿ ಕೂಡ ಇದೆ. ಈಗ ಈ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡುತ್ತಿರುವ 230 ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಡಲಾಗುವ ಸ್ಕಾಲರ್ ಶಿಪ್ ನ್ನೇ ಕೊಟ್ಟಿಲ್ಲ.
ಹೌದು! ಕಳೆದ ಸುಮಾರು 18 ತಿಂಗಳಿಂದ 10 ಸಾವಿರದಂತೆ ಸ್ಕಾಲರ್ ಶಿಪ್ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಬರಬೇಕು. ಈ ವಿಶ್ವವಿದ್ಯಾಲಯದಲ್ಲಿ ಹೊರಗಿನ ಜಿಲ್ಲೆಯ ವಿದ್ಯಾರ್ಥಿಗಳೇ ಹೆಚ್ಚು ಇದ್ದಾರೆ. ಅವರು ಹಾಗೋ ಹೀಗೋ ಸ್ಕಾಲರ್‌ಶಿಪ್ ಇಲ್ಲದೇ 18 ತಿಂಗಳ ಕಾಲ ಸಂಶೋಧನೆ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಸ್ಕಾಲರ್ ಶಿಪ್ ಕೊಡದೇ ಇದ್ದರೆ ಹೋರಾಟಕ್ಕೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಸ್ಕಾಲರ್ ಶಿಪ್ ಕಥೆ ಒಂದು ಕಡೆಯಾದರೆ, ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಕೊಡಲಾಗುವ ಲ್ಯಾಪ್ ಟಾಪ್ ಕೂಡ ಕೊಟ್ಟಿಲ್ಲವಂತೆ. ಲ್ಯಾಪ್ ಟಾಪ್ ಇಲ್ಲದೇ ಹೇಗೆ ಸಂಶೋಧನೆ ಮಾಡಬೇಕು ಎಂದು ಇವರು ಹೋರಾಟಕ್ಕೆ ಇಳಿಯಲಿದ್ದಾರೆ. ಸುಮಾರು 6 ವರ್ಷಗಳಿಂದ ಲ್ಯಾಪ್ ಟಾಪ್ ಇಲ್ಲದೇ ಕೆಲವರು ಸಂಶೋಧನಾ ಅಭ್ಯಾಸ ಮುಗಿಸಿದ್ದಾರೆ. ಈಗ ಇದ್ದವರಿಗಾದರೂ ಲ್ಯಾಪ್ ಟಾಪ್ ಕೊಡಲಿ ಎಂದು ಒತ್ತಾಯ ಮಾಡುತ್ತಿದ್ದಾರೆ.
ಇದನ್ನು ಕುಲಪತಿಗಳಿಗೆ ಕೇಳಿದರೆ, ಮೊದಲು ಸಂಶೋಧನಾ ವಿದ್ಯಾರ್ಥಿಗಳಿಗೆ 6 ಸಾವಿರ ಮಾತ್ರ ಸ್ಕಾಲರ್ ಶಿಪ್ ಇತ್ತು. ಈಗ 10 ಸಾವಿರ ಮಾಡಿದ್ದೇವೆ. ಸದ್ಯದಲ್ಲೇ ಎಲ್ಲರಿಗೂ ಸ್ಕಾಲರ್ ಶಿಪ್ ಸಿಗಲಿದೆ ಎನ್ನುತ್ತಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಸಹ ಸೂಚನೆ ನೀಡಲಾಗಿದೆ ಎನ್ನುತ್ತಾರೆ. ಇನ್ನು ಎಸ್‌ಸಿ, ಎಸ್‌ಟಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆ ಅಡಿ ಲ್ಯಾಪ್ ಟಾಪ್ ಹಣ ಬರಬೇಕಾಗಿದೆ ಎನ್ನುತ್ತಾರೆ.
ಸದ್ಯ ಕರ್ನಾಟಕ ವಿವಿಯ ವಿದ್ಯಾರ್ಥಿಗಳ ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಬೇಕಿದೆ. ಸದ್ಯದಲ್ಲೇ ಬೆಳಗಾವಿ ಅಧಿವೇಶನ ಇರುವ ಕಾರಣ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಅದು ಆಗುವ ಮೊದಲೇ ಕರ್ನಾಟಕ ವಿವಿ ಸ್ಕಾಲರ್ ಶಿಪ್ ಹಾಗೂ ಲ್ಯಾಪ್‌ಟಾಪ್ ಕೊಡಬೇಕಾಗಿದೆ.
Kshetra Samachara
03/12/2024 06:32 pm