ಧಾರವಾಡ: ಒಂದಾನೊಂದು ಕಾಲದಲ್ಲಿ ಗಂಡು ಮೆಟ್ಟಿದ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು ಅಂತಲೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಭೂಗತ ಲೋಕದಲ್ಲಿ ತನ್ನ ಪಾತ್ರವನ್ನು ನಿಭಾಯಿಸಿ ಛೋಟಾ ಬಾಂಬೆ ಎಂತಲೇ ಹೆಸರು ಪಡೆದುಕೊಂಡಿತ್ತು. ಈಗಲೂ ಹುಬ್ಬಳ್ಳಿಯ ಆ ಕರಾಳ ಅಧ್ಯಾಯದಲ್ಲಿ ಒಂದೊಂದೇ ಪುಟಗಳು ಸೇರುತ್ತಲೇ ಇವೆ. ಈಗಲೂ ಹುಬ್ಬಳ್ಳಿಯನ್ನು ಕರೆಯೋದು ಛೋಟಾ ಬಾಂಬೆ ಅಂತಲೇ.
ಈ ಹುಬ್ಬಳ್ಳಿಯ ಭೂಗತ ಲೋಕದ ಘಟನೆಗಳನ್ನು ಬಿಚ್ಚಿಡುವ ಹಾಗೂ ಆ ಪಾತಕ ಕೃತ್ಯಗಳನ್ನು ಹೇಗೆ ತಡೆಗಟ್ಟಬೇಕು ಎಂಬುದರ ಕುರಿತಾಗಿ ಚಲನಚಿತ್ರವೊಂದು ತಯಾರಾಗಿದ್ದು, ನಾಳೆ ರಾಜ್ಯದಾದ್ಯಂತ ಬಿಡುಗಡೆ ಸಹ ಆಗಲಿದೆ. ಈ ಚಿತ್ರವನ್ನು ಉತ್ತರ ಕರ್ನಾಟಕದವೇ ನಿರ್ಮಿಸಿದ್ದಾರೆ. ಉತ್ತರ ಕರ್ನಾಟಕದವರೇ ನಟಿಸಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಡ 'ಛೋಟಾ ಬಾಂಬೆ'.
ವೈ.ಕೆ. ಸಿನಿ ಕ್ರಿಯೇಷನ್ಸ್ ಅಡಿ ನಿರ್ಮಾಣವಾದ ಈ ಚಿತ್ರವನ್ನು ಯೂಸುಫ್ ಖಾನ್ ರಚಿಸಿ, ನಿರ್ಮಿಸಿ, ನಿದೇರ್ಶನ ಕೂಡ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ಸೂರಜ್ ಸಾಸನೂರ ಅವರು ಕಾಣಿಸಿಕೊಂಡಿದ್ದು, ಧಾರವಾಡದವರೇ ಆದ ಸಲೀಂ ಮುಲ್ಲಾನವರ ಅವರು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐದು ಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಾಣಗೊಂಡಿದ್ದು, ರಾಜ್ಯದ 169 ಚಿತ್ರಮಂದಿರಗಳಲ್ಲಿ ನಾಳೆ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ರೌಡಿಸಂ ತಡೆಗಟ್ಟುವುದು ಹೇಗೆ? ಎಂಬುದನ್ನು ತಿಳಿಸಿಕೊಡುವುದೇ ಈ ಚಿತ್ರದ ಮುಖ್ಯ ಉದ್ದೇಶವಾಗಿದೆ.
ಗುರುವಾರ ಚಿತ್ರತಂಡದ ಸದಸ್ಯರು ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಮಾಹಿತಿ ನೀಡಿದರು.
ಈ ಚಿತ್ರದಲ್ಲಿ ಕೇವಲ ರೌಡಿಸಂ ಮಾತ್ರವಲ್ಲ. ಲವ್ ಸ್ಟೋರಿ, ಹಾಸ್ಯ ಎಲ್ಲವೂ ಇದೆ. ದೀಪಕ ಬೊಂಗಲೇ ಸಹನಿರ್ದೇಶನ ಮಾಡಿದ್ದು, ಗೌರಿ ವೆಂಕಟೇಶ ಛಾಯಾಗ್ರಹಣ ಮಾಡಿದ್ದಾರೆ. ಶಿವು ಬೆರಗಿ ಸಂಗೀತ ಸಾಹಿತ್ಯ ರಚಿಸಿದ್ದಾರೆ. ಧಾರವಾಡ, ಬೆಳಗಾವಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರ ಚಿತ್ರೀಕರಣಗೊಂಡಿದೆ. ಏನೇ ಆಗಲಿ ಉತ್ತರ ಕರ್ನಾಟಕದವರೇ ಮಾಡಿರುವ ಈ ಚಿತ್ರ ಯಶಸ್ಸು ಕಾಣಲಿ ಎಂದು ಹಾರೈಸೋಣ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/07/2022 05:12 pm