ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಉದಪುಡಿ ಗ್ರಾಮದಲ್ಲಿ ಆರು ವರ್ಷ ಬಂದಾಗಿದ್ದ ಶ್ರೀ ಶಿವಸಾಗರ ಶುಗರ್ ಆ್ಯಂಡ್ ಆಗ್ರೋ ಪ್ರಾಡಕ್ಟ್ಸ್ ಲಿ. ಕಳೆದ ವಾರ ಪುನರ್ ಆರಂಭವಾಗಿದ್ದು, ಅದನ್ನು ಮುಚ್ಚಲು ಕೆಲ ನಿರ್ದೇಶಕರು ಹುನ್ನಾರ ಮಾಡಿ ಪ್ರತಿಭಟನೆ ಮಾಡುತ್ತಿರುವುದು ಖಂಡನೀಯ ಎಂದು ಉತ್ತರ ಕರ್ನಾಟಕ ರೈತ ಹಾಗೂ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜೇಂದ್ರ ಪಾಟೀಲ್ ಎಂಬುವವರು ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡಿದ್ದಾರೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲ ಆಗಲಿದೆ. ಆದರೆ ಕಾರ್ಖಾನೆಯ ಈ ಹಿಂದಿನ ನಿರ್ದೇಶಕರಾಗಿದ್ದ ಆನಂದ ಕುಲಕರ್ಣಿ ಹಾಗೂ ಇತರರು ಕಾರ್ಖಾನೆಯನ್ನು ಪುನಃ ಮುಚ್ಚಲು ಹುನ್ನಾರ ಮಾಡುತ್ತಿದ್ದಾರೆ. ರಾಜೇಂದ್ರ ಅವರು ಈ ಹಿಂದೆ 2013 ಮತ್ತು 14ರಲ್ಲಿ ರೈತರಿಗೆ ಕಬ್ಬು ಬಿಲ್ ಪಾವತಿ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ ಎಂದು ದೂರಿ ಪ್ರತಿಭಟನೆ ಮಾಡಿಸುತ್ತಿದ್ದಾರೆ. ರಾಮದುರ್ಗ ಶಾಸಕರು ಹಾಗೂ ಆನಂದ ಕುಲಕರ್ಣಿ ಸಕ್ಕರೆ ಕಾರ್ಖಾನೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಸಲುವಾಗಿ ಈ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಾಕಿ ಇರುವ ಬಿಲ್ಲನ್ನು ಈಗಾಗಲೇ ರೈತರಿಗೆ ಕಾರ್ಖಾನೆ ಪಾವತಿ ಮಾಡುತ್ತಿದೆ. ಅದಕ್ಕಾಗಿ ಮೊದಲ ಹಂತದಲ್ಲಿ ಸುಮಾರು 200 ರೈತರಿಗೆ ಹಣ ನೀಡಲಾಗಿದೆ. ಹೀಗಾಗಿ ರೈತರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಒಂದು ವೇಳೆ ಕಾರ್ಖಾನೆ ಮುಚ್ಚಲು ಕಾರಣರಾದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.
Kshetra Samachara
25/11/2021 03:18 pm