ಪಬ್ಲಿಕ್ ನೆಕ್ಸ್ಟ್ ವಿಶೇಷ : ವಿನೋದ ಇಚ್ಚಂಗಿ
ನವಲಗುಂದ : ಧಾರವಾಡ ಜಿಲ್ಲೆಯ ನವಲಗುಂದ ಕಳೆದ ಎರಡು ವರ್ಷಗಳಿಂದ ಅತಿ ಹೆಚ್ಚು ಪ್ರವಾಹಕ್ಕೆ ಸಿಲುಕಿದ ತಾಲೂಕು. ಬೆಣ್ಣೆ ಹಳ್ಳ ಹಾಗೂ ತುಪ್ಪರಿ ಹಳ್ಳಗಳಿಗೆ ಬಂದಿದ್ದ ಪ್ರವಾಹ ಎಲ್ಲಾ ಬೆಳೆಗಳನ್ನು ನುಂಗಿ ಹಾಕಿತ್ತು. ಇದೀಗ ಕಡಲೆಕಾಯಿ ಬೆಳೆಗೂ ಸಂಕಷ್ಟ ಎದುರಾಗಿತ್ತು. ಅದೇನಂತೀರಾ ಇಲ್ಲಿದೆ ನೋಡಿ...
ಈ ಬಾರಿ ಸುರಿದ ಅತಿವೃಷ್ಟಿಯಿಂದ ಮುಂಗಾರು ಬೆಳೆಯನ್ನು ಕಳೆದುಕೊಂಡಿದ್ದ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿತ್ತು, ಅದು ಕಡಲೆ ಬೆಳೆಗೆ ಅಂಟಿಕೊಂಡಿರುವ ಕೀಟಬಾಧೆ ರೈತರಲ್ಲಿ ಆತಂಕ ಸೃಷ್ಟಿಸಿತ್ತು.
ಅದರಲ್ಲೂ ಪ್ರವಾಹದಿಂದಾಗಿ ಭಾರಿ ನಷ್ಟ ಅನುಭವಿಸಿದ್ದ ನವಲಗುಂದ ರೈತರಿಗೆ ಈ ಕೀಟಬಾಧೆಯಿಂದ ಮತ್ತೊಂದು ಸಂಕಷ್ಟ ಎದುರಾಗಿತ್ತು. ಒಂದು ಕಡೆ ಕೃಷಿಗಾಗಿ ಮಾಡಿಕೊಂಡಿರುವ ಸಾಲ, ಮತ್ತೊಂದು ಕಡೆ ಹಾಕಿದ ಹಣ ಮರಳಿ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕ. ಇದೆಲ್ಲದರ ನಡುವೆಯೇ ರೈತರು ಜೀವನ ನಡೆಸುವಂತಾಗಿತ್ತು. ಆದರೆ ಈಗ ಕಡಲೆ ಬೆಳೆ ರೈತರ ಕೈ ಹಿಡಿದಿದೆ.
ಕೀಟಬಾಧೆಯಿಂದ ಕಡಲೆ ಬೆಳೆ ಹೊರಬಂದಿದೆ. ಅದಕ್ಕೆ ವಾತಾವರಣವು ಕೈ ಜೋಡಿಸಿದ್ದು, ಸರಿಯಾದ ಕೀಟನಾಶಕ ಔಷಧಿ ಸಿಂಪಡಣೆಯಿಂದಾಗಿ ಕಡಲೆ ಬೆಳೆ ರೈತನಿಗೆ ತೃಪ್ತಿ ನೀಡಿದೆ, ಈ ಬಗ್ಗೆ ನವಲಗುಂದದ ರೈತ ಬಸವಂತಪ್ಪ ಹಳ್ಳದ ತಮ್ಮ ಸಂತಸ ಹಂಚಿಕೊಂಡದ್ದು ಹೀಗೆ...
ಬಹುತೇಕ ಕಡೆಗಳಲ್ಲಿ ಕಡಲೆ ಬೆಳೆಯು ಕೀಟಗಳಿಂದ ಸಾಕಷ್ಟು ಹಾನಿಗೀಡಾಗಿದೆ. ಇದರಿಂದ ರೈತರು ಕಂಗಾಲಾಗಿದ್ದರು. ಆದರೆ ಈಗ ಸರಿಯಾದ ಕೀಟ ನಾಶಕ ಔಷಧಿ ಸಿಂಪಡಣೆಯಿಂದಾಗಿ ರೈತರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಕೈಗೆ ಸಿಕ್ಕಿದೆ. ಇದರಿಂದಾಗಿ ನವಲಗುಂದ ಭಾಗದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
Kshetra Samachara
07/01/2021 09:18 pm