ದೇವನಹಳ್ಳಿ: 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕಾರಣಿಗಳ ಪಕ್ಷಾಂತರ ಸಾಮಾನ್ಯ. ಅಂತೆಯೇ ಬಹುದಿನಗಳಿಂದ ಚರ್ಚೆಯಲ್ಲಿರುವ ಮಾಜಿ ಶಾಸಕ ಪಿಳ್ಳ ಮುನಿಶ್ಯಾಮಪ್ಪ ಬಿಜೆಪಿ ಸೇರ್ಪಡೆ ಬಹುತೇಕ ಖಚಿತವಾಗಿದೆ.
ದೇವನಹಳ್ಳಿ ಮಾಜಿ ಶಾಸಕ ಪಿಳ್ಳ ಮುನಿಶ್ಯಾಮಪ್ಪ ಬಿಜೆಪಿ ಸೇರ್ಪಡೆ ಎಂಬ ವದಂತಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಇದಕ್ಕೆ ಸಾಕ್ಷಿ ಎನ್ನುವಂತೆ ಮೊನ್ನೆ ದೇವನಹಳ್ಳಿ ತಾಲೂಕಿನ ವೆಂಕಟಗಿರಿ ಕೋಟೆಯಲ್ಲಿ ನಡೆದ ಸರ್ಕಾರಿ ಶಾಲೆ ಉದ್ಘಾಟನೆಗೆ ಬಂದಿದ್ದ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಅವರೊಂದಿಗೆ ಪಿಳ್ಳ ಮುನಿಶ್ಯಾಮಪ್ಪ ಕಾಣಿಸಿಕೊಂಡಿದ್ದು, ತಮ್ಮ ರಾಜಕೀಯ ಭವಿಷ್ಯ ಬಗ್ಗೆ ಚರ್ಚಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆಯ ಕೊನೆ ಕ್ಷಣಗಳಲ್ಲಿ ಜೆಡಿಎಸ್ ನಿಂದ ಟಿಕೆಟ್ ವಂಚಿತರಾಗಿದ್ದ ಪಿಳ್ಳ ಮುನಿಶ್ಯಾಮಪ್ಪ, ಅನಂತರ ರಾಜಕೀಯದಿಂದ ದೂರವಾಗಿಯೇ ಇದ್ದರು. ಆದರೆ, ತೆರೆಮರೆಯಲ್ಲಿ ಬಿಜೆಪಿ ರಾಜ್ಯ ಮಟ್ಟದ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಕಳೆದ ವರ್ಷ ಬಿಜೆಪಿಗೆ ಸೇರ್ಪಡೆಯಾಗುತ್ತಾರೆಂಬ ಮಾತು ಕೇಳಿ ಬಂದಿತ್ತು. ಆದರೆ, ಪಿಳ್ಳ ಮುನಿಶ್ಯಾಮಪ್ಪ ತಟಸ್ಥರಾಗಿಯೇ ಇದ್ದರು. ಈ ಬಾರಿ ಬೃಹತ್ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗುವ ಎಲ್ಲ ಲಕ್ಷಣಗಳು ಗೋಚರಿಸಿದೆ.
Kshetra Samachara
14/02/2022 09:01 pm